ಹ್ಯಾಮಿಲ್ಟನ್, ಫೆ 5 (DaijiworldNews/SM): ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸೋಲನುಭವಿಸಿದೆ. ಆ ಮೂಲಕ ಟಿ-20 ಸರಣಿಯಲ್ಲಿಭರ್ಜರಿಯಾಗಿದ್ದ ಗೆಲ್ವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ.
ಬುಧವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಡಿಯಾ ಐವತ್ತು ಓವರ್ ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 347 ರನ್ ಗಳಿಸಿತು. ಭಾರತದ ಪರ ಶ್ರೇಯಸ್ ಐಯರ್ ಶತಕ ಸಿಡಿಸಿ ಮಿಂಚಿದರು. ನಾಯಕ ವಿರಾಟ್ 51 ಸಿಡಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಕನ್ನಡಿಗ ಲೋಕೇಶ್ ರಾಹುಲ್ 88 ರನ್ ಗಳಿಸಿ ಅಜೇಯರಾಗಿ ಉಳಿದರು.
ಇನ್ನು ಭಾರತ ನೀಡಿದ 348 ರನ್ ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ ಯಶಸ್ವಿಯಾಗಿ ಗುರಿ ಮುಟ್ಟಿತು. ಆರಂಭಿಕರು ತಂಡಕ್ಕೆ ಉತ್ತಮ ಪ್ರದರ್ಶನದಿಂದ ತಂಡಕ್ಕೆ ಅಡಿಪಾಯ ಹಾಕಿಕೊಟ್ಟರು. ಆರಂಭಿಕ ಹೆನ್ರಿ ನಿಕೋಲಸ್ 78 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ರಾಸ್ ಟೇಲರ್ (109) ಶತಕ ಸಿಡಿಸಿ ಮಿಂಚಿದರು. ಇನ್ನುಳಿದಂತೆ ಟಾಮ್ ಲತಮ್ 69 ರನ್ ಗಳಿಸಿದರು. ಅಂತಿಮವಾಗಿ 48.1 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ ನ್ಯೂಜಿಲ್ಯಾಂಡ್ ತಂಡ ೩೪೮ ರನ್ ಗಳಿಸಿ ಗೆಲುವಿನ ನಗೆ ಚೆಲ್ಲಿತು. ಆ ಮೂಲಕ ಏಕದಿನ ಸರಣಿಯಲ್ಲಿ 1-0 ಮುನ್ನಡೆಯನ್ನು ನ್ಯೂಜಿಲ್ಯಾಂಡ್ ತಂಡ ಕಾಯ್ದುಕೊಂಡಿದೆ.
ಇನ್ನು ಹ್ಯಾಮಿಲ್ಟನ್ ಮೈದಾನದಲ್ಲಿ ಬೃಹತ್ ಮೊತ್ತ ಬೆನ್ನಟಿರುವ ಹಲವು ದಾಖಲೆಗಳು ನ್ಯೂಜಿಲ್ಯಾಂಡ್ ತಂಡಕ್ಕಿದ್ದು, ಇದು ಇದುವರೆಗಿನ ಗರಿಷ್ಟ ಚೇಸಿಂಗ್ ಆಗಿದೆ.