ಹ್ಯಾಮಿಲ್ಟನ್, ಫೆ 04 (DaijiworldNews/SM): ನ್ಯೂಜಿಲ್ಯಾಂಡ್ ಅಂಗಲದಲ್ಲಿ ಟಿ-20 ಸರಣಿ ಗೆದ್ದಿರುವ ಟೀಂ ಇಂಡಿಯಾ ಇದೀಗ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ಬುಧವಾರದಂದು ಏಕದಿನ ಪಂದ್ಯಗಳು ಆರಂಭಗೊಳ್ಳಲಿದೆ. ಮತ್ತೆ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಅಬ್ಬರಿಸಲು ಟೀಂ ಇಂಡಿಯಾ ರೆಡಿಯಾಗಿದೆ. ಬುಧವಾರದಂದು ಭಾರತ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಏಕದಿನ ಪಂದ್ಯ ನಡೆಯಲಿದೆ.
ಟಿ-20ಯ ಮೂರು ಪಂದ್ಯಗಳಲ್ಲಿ ಅಬ್ಬರಿಸಿರುವ ರೋಹಿತ್ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಬೆಕಾದ ಅನಿವಾರ್ಯತೆ ಭಾರತಕ್ಕಿದೆ. ರೋಹಿತ್ ಅನುಪಸ್ಥಿತಿ ಟೀಂ ಇಂಡಿಯಾಕ್ಕೆ ಕಾಡಲಿದೆ. ರೋಹಿತ್ ಕೊನೆಯ ಟಿ-20 ಪಂದ್ಯದಲ್ಲಿ ಗಾಯಗೊಂಡಿದ್ದರು. ಕೇನ್ ಭಾರತದ ವಿರುದ್ಧ ಮೂರನೇ ಟಿ-20 ಹಣಾಹಣಿಯಲ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದರು. ಆದರೆ, ಟಿ-20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ವಿಶ್ವಾಸವನ್ನು ಮರೆತು ಕೊಹ್ಲಿ ಪಡೆ ಏಕದಿನ ಸರಣಿಯಲ್ಲಿ ಹೊಸ ಯೋಚನೆಯೊಂದಿಗೆ ಅಂಗಳ ಪ್ರವೇಶಿಸಲಿದೆ. ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಭಾರತ ತವರು ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಏಕದಿನ ಸರಣಿ ಗೆದ್ದು ಬೀಗಿತ್ತು.
ಇನ್ನು ಇದಕ್ಕೂ ಮುನ್ನ ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಸೋಲನುಭವಿಸಿರುವುದನ್ನು ಮರೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಏಕದಿನ ಪಂದ್ಯ ಟಿ-೨೦ ಪಂದ್ಯಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಏಕದಿನ ಪಂದ್ಯದಲ್ಲಿ ಜವಾಬ್ದಾರಿಯಿಂದ ವರ್ತಿಸಿ ಪಂದ್ಯವನ್ನಾಡಬೇಕಾದ ಅನಿವಾರ್ಯತೆ ಭಾರತಕ್ಕಿದೆ. ಹಾಗದಲ್ಲಿ ಏಕದಿನ ಸರಣಿಯಲ್ಲೂ ಕೂಡ ಟೀಂ ಇಂಡಿಯಾ ಮೇಲುಗೈ ಸಾಧಿಸಬಹುದಾಗಿದೆ.