ಮುಂಬೈ, ಫೆ.01 (Daijiworld News/PY) : ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ತಂಡ ಆಡಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯಿಂದಲೂ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಶನಿವಾರ ತಿಳಿಸಿದೆ.
ಹಾರ್ದಿಕ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಪ್ರಧಾನ ಫಿಸಿಯೋ ಆಶಿಶ್ ಕೌಶಿಕ್ ಅವರೊಂದಿಗೆ ಲಂಡನ್ಗೆ ಪ್ರಯಾಣ ಬೆಳೆಸಿ ಬೆನ್ನುಮೂಳೆಯ ಸರ್ಜನ್ ಡಾ. ಜೇಮ್ಸ್ ಅಲ್ಲೀಬೋನ್ ಅವರನ್ನು ಭೇಟಿಯಾಗಲಿದ್ದಾರೆ. ಸಂಪೂರ್ಣ ಫಿಟ್ನೆಸ್ಗೆ ಮರಳುವವರೆಗೂ ಪಾಂಡ್ಯ ಎನ್ಸಿಎ ಪುನರ್ ವಸತಿ ಶಿಬಿರದಲ್ಲಿರಲಿದ್ದಾರೆ ಎಂಬುದಾಗಿ ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಫಿಟ್ನೆಸ್ ಪರೀಕ್ಷೆಗೆ ಒಳಪಟ್ಟಿದ್ದ 26 ವರ್ಷದ ಹಾರ್ದಿಕ್ ಪಾಂಡ್ಯ ತಮ್ಮ ಸಾಮರ್ಥ್ಯ ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದರು. ಇದೇ ಕಾರಣಕ್ಕೆ ಅವರನ್ನು ನ್ಯೂಜಿಲೆಂಡ್ ಪ್ರವಾಸದ ಭಾರತ 'ಎ' ತಂಡದಿಂದಲೂ ಹಾರ್ದಿಕ್ ಪಾಂಡ್ಯಾ ಅವರನ್ನು ಸೆಲೆಕ್ಟರ್ಗಳು ಕೈಬಿಟ್ಟಿದ್ದರು.
ಪಾಂಡ್ಯ ಸ್ಥಾನದಲ್ಲಿ ತಮಿಳುನಾಡಿನ ವಿಜಯ್ ಶಂಕರ್ ಸ್ಥಾನ ಪಡೆದಿದ್ದರು. ಕಿವೀಸ್ ಪ್ರವಾಸದಲ್ಲಿ ಭಾರತ 'ಎ' ತಂಡ 50 ಓವರ್ಗಳ 2 ಅಭ್ಯಾಸ ಪಂದ್ಯ, 3 ಪಂದ್ಯಗಳ ಏಕದಿನ ಕ್ರಿಕೆಟ್ ಹಾಗೂ 4 ದಿನಗಳ ಎರಡು ಟೆಸ್ಟ್ ಪಂದ್ಯಗಳನ್ನು ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಆಡಲು ಆಯೋಜಿಸಲಾಗಿತ್ತು.
ಈ ಸಂದರ್ಭ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿ, ಹಾರ್ದಿಕ್ ಪಾಂಡ್ಯ ಪಂದ್ಯಗಳನ್ನಾಡಲು ಬೇಕಿರುವ ಸಂಪೂರ್ಣ ಫಿಟ್ನೆಸ್ ಕಂಡುಕೊಂಡಿಲ್ಲ. ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವ ಕಾರಣ ಅವರು ಸಂಪೂರ್ಣವಾಗಿ ಚೇತರಿಸಲು ಇನ್ನು ಸಮಯ ಬೇಕಿದೆ. ಪಾಂಡ್ಯ ಈಗ ಆಡಲು ಸಾಧ್ಯವಿಲ್ಲ. ಸಂಪೂರ್ಣ ಫಿಟ್ನೆಸ್ಗೆ ಮರಳಲು ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಭಾರತ ತಂಡದ ನ್ಯೂಜಿಲೆಂಡ್ ಪ್ರವಾಸದಲ್ಲಿ 5 ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ನಂತರ 3 ಪಂದ್ಯಗಳ ಒಡಿಐ ಹಾಗೂ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಅಂಗವಾಗಿ 2 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯನ್ನಾಡಲಿದೆ. ಮೊದಲ ಪಂದ್ಯ ವೆಲ್ಲಿಂಗ್ಟನ್ನಲ್ಲಿ ಹಾಘೂ 2ನೇ ಪಂದ್ಯ ಕ್ರೈಸ್ಟ್ಚರ್ಚ್ನಲ್ಲಿ ನಡೆಯಲಿದೆ.