ಹ್ಯಾಮಿಲ್ಟನ್ ಜ 29 (DaijiworldNews/SM): ಸೂಪರ್ ಓವರ್ ನಲ್ಲಿ ಹಿಟ್ ಮ್ಯಾನ್ ಸಿಡಿಸಿದ ಅದ್ಭುತ ಸಿಕ್ಸ್ ನೊಂದಿಗೆ ಭಾರತ ನ್ಯೂಜಿಲೆಂಡ್ ನೆಲದಲ್ಲಿ ಐತಿಹಾಸಿಕ ಗೆಲುವನ್ನು ತನ್ನದಾಗಿಸಿಕೊಂಡಿತು. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸ್ ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ ಟೈ ಆದ ಪಂದ್ಯವನ್ನು ವಿರಾಟ್ ಕೊಹ್ಲಿ ಬಳಗ ಸೂಪರ್ ಓವರ್ನಲ್ಲಿ ಗೆದ್ದುಕೊಂಡು, ಐದು ಪಂದ್ಯಗಳ ಸರಣಿಯನ್ನು 3–0 ಯಿಂದ ವಶಪಡಿಸಿಕೊಂಡಿತು. ಇದರೊಂದಿಗೆ ಕೊಹ್ಲಿ ಪಡೆಯು ನ್ಯೂಜಿಲೆಂಡ್ನಲ್ಲಿ ಮೊದಲ ಸರಣಿ ಗೆದ್ದ ದಾಖಲೆ ಬರೆಯಿತು.
ಇಲ್ಲಿನ ಸೆಡನ್ ಪಾರ್ಕ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 20 ಓವರ್ಗಳಲ್ಲಿ 179 ರನ್ ಪೇರಿಸಿತ್ತು. ಕೆ.ಎಲ್. ರಾಹುಲ್ ಜೊತೆ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾರವರ ಭರ್ಜರಿ ಬ್ಯಾಟಿಂಗ್ ತಂಡದ ಮೊತ್ತ ಏರುವಂತೆ ಮಾಡಿತು. ಮೊದಲ ವಿಕೆಟ್ಗೆ ಈ ಜೋಡಿ 9 ಓವರ್ಗಳಲ್ಲಿ 89 ರನ್ ಗಳಿಸಿದ್ದರು. ಕೇವಲ 40 ಎಸೆತಗಳನ್ನು ಎದುರಿಸಿದ ರೋಹಿತ್ 3 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 65 ರನ್ ಗಳಿಸಿದ್ದರು. ರಾಹುಲ್ 19 ಎಸೆತಗಳಲ್ಲಿ 27ರನ್ ಗಳಿಸಿ ಮೊನ್ರೋಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಶಿವಂ ದುಬೆ 3ರನ್ ನಿಂದ ನಿರ್ಗಮಿಸಿದರೆ, ತಂಡಕ್ಕೆ ಕೊಂಚ ಚೇತರಿಕೆ ನೀಡಿದ್ದು, ನಾಯಕ ವಿರಾಟ್ ಕೊಹ್ಲಿ (27 ಎಸೆತಗಳಿಂದ 38ರನ್). ಶ್ರೇಯಸ್ ಅಯ್ಯರ್ 16 ಎಸೆತಗಳಲ್ಲಿ 17ರನ್ ಕಲೆ ಹಾಕಿ ಪೆವಿಲಿಯನ್ ಕಡೆ ಸಾಗಿದರು. ಅಂತಿಮ ಘಟ್ಟದಲ್ಲಿ ಮನೀಶ್ ಪಾಂಡೆ (14 ರನ್, 6ಎಸೆತ) ಹಾಗೂ ರವೀಂದ್ರ ಜಡೇಜಾ (10ರನ್ 5 ಎಸೆತ) ಭರ್ಜರಿ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ ಏರಿಸಿದರು.
ಈ ಗುರಿ ಬೆನ್ನಟ್ಟಿದ ಕಿವೀಸ್ ಕೂಡ 5 ವಿಕೆಟ್ ಕಳೆದುಕೊಂಡು 179ರನ್ ಗಳಿಸಲಷ್ಟೇ ಶಕ್ತವಾಯಿತು. ನ್ಯೂಜಿಲೆಂಡ್ ಪರ ನಾಯಕ ವಿಲಿಯಮ್ಸನ್ (95ರನ್, 48ಎಸೆತ) ಶತಕದ ಹೊಸ್ತಿಲಲ್ಲಿ ಶಮಿಗೆ ವಿಕೆಟ್ ಒಪ್ಪಿಸಿ ಶತಕ ವಂಚಿತರಾದರು. ವಿಲಿಯಮ್ಸನ್ ಹೋರಾಟಾದ ಹೊರತಾಗಿಯೂ ಪಂದ್ಯ ರೋಚಕ ‘ಟೈ’ ಆಯಿತು. ಕಿವೀಸ್ ಪಡೆಗೆ ಕೊನೆಯ ಓವರ್ನಲ್ಲಿ 9 ರನ್ ಗಳಿಸಬೇಕಿತ್ತು. ಆದರೆ ಈ ಓವರ್ನಲ್ಲಿ ನಾಯಕ ಕೇನ್ ವಿಲಿಯಮನ್ಸ್ ಮತ್ತು ರಾಸ್ ಟೇಲರ್ ವಿಕೆಟ್ ಕಬಳಿಸಿದ ಶಮಿ ಕೇವಲ 8 ರನ್ ಬಿಟ್ಟುಕೊಟ್ಟರು.
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 1 ಓವರ್ನಲ್ಲಿ 17 ರನ್ ಕಲೆಹಾಕಿತ್ತು. ಈ ಗುರಿ ಎದುರು ಭಾರತ 20 ರನ್ ಗಳಿಸಿ ವಿಜಯಿ ಎನಿಸಿತು. ರೋಹಿತ್ ಮೊದಲ ಎಸೆತದಲ್ಲಿ 2, ಎರಡನೇ ಎಸೆತದಲ್ಲಿ 1 ರನ್ ಗಳಿಸಿದರು. ಮೂರನೇ ಎಸೆತವನ್ನು ರಾಹುಲ್ ಬೌಂಡರಿಗಟ್ಟಿ ನಂತರದ ಎಸೆತದಲ್ಲಿ 1 ರನ್ ಪಡೆದರು. ಹೀಗಾಗಿ ಕೊನೆಯ ಎರಡು ಎಸೆತಗಳಲ್ಲಿ ಗೆಲುವಿಗೆ 10 ರನ್ ಬೇಕಿತ್ತು. ರೋಹಿತ್ ಶರ್ಮಾ ಆ ಎರಡೂ ಎಸೆತಗಳನ್ನು ಸಿಕ್ಸರ್ ಗಟ್ಟಿ ಭಾರತಕ್ಕೆ ಜಯ ತಂದುಕೊಟ್ಟರು. ಭಾರತ ಪರ ಬೂಮ್ರಾ ಹಾಗೂ ನ್ಯೂಜಿಲೆಂಡ್ ಪರ ಟಿಮ್ ಸೌಥಿ ಸೂಪರ್ ಓವರ್ ಎಸೆದರು.