ಹ್ಯಾಮಿಲ್ಟನ್, ಜ 28 (DaijiworldNews/SM): ಕಳೆದ ವಿಶ್ವಕಪ್ ಸೋಲಿನ ನಡುವೆಯೂ ನಿರಂತರವಾಗಿ ಸರಣಿ ಗೆಲುವುಗಳ ಮೂಲಕ ವಿಜಯದ ನಾಗಲೋಟ ಮುಂದುವರೆಸುತ್ತಿರುವ ಟೀಂ ಇಂಡಿಯಾಕ್ಕೆ ಆರಂಭಿಕ ಆಟಗಾರ ರಾಹುಲ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಐಯ್ಯರ್ ಉತ್ತಮ ಪ್ರದರ್ಶನ ಟೀಂ ಇಂಡಿಯಾದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಈ ನಡುವೆ ಈ ಇಬ್ಬರು ಆಟಗಾರರ ಪ್ರದರ್ಶನದ ಬಗ್ಗೆ ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ನ್ಯೂಜಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ಈಗಾಗಲೇ 2-0 ಮುನ್ನಡೆ ಸಾಧಿಸಿದೆ. ಬುಧವಾರದಂದು ಮೂರನೇ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ರಾಥೋಡ್,'' ಹಲವು ಅವಕಾಶ ತೆಗೆದುಕೊಂಡು ರಾಹುಲ್ ಹಾಗೂ ಅಯ್ಯರ್ ತಾವು ಪಂದ್ಯ ವಿಜೇತರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಇವರ ಪ್ರದರ್ಶನ ತಂಡದ ಗೆಲುವಿಗೆ ನೆರವಾಗಿದೆ.
ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅವರು ಯುವ ಆಟಗಾರರಾಗಿದ್ದು, ಅವರು ಪಂದ್ಯ ವಿಜೇತರು ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಈಗ ತಮಗೆ ಸಿಕ್ಕಿದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಹಾಗೂ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರ್ಪಡಿಸುತ್ತಿದ್ದಾರೆ ಎಂದರು. ಅಲ್ಲದೆ ಪಂದ್ಯಕ್ಕನುಗುಣವಾಗಿ ತಮ್ಮ ಬ್ಯಾಟ್ ಬೀಸುತ್ತಿದ್ದು ಇದು ಗೆಲುವಿಗೆ ಪೂರಕವಾಗಿದೆ ಎಂದಿದ್ದಾರೆ.