ನವದಹೆಲಿ, ಜ.25 (Daijiworld News/PY) : ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಭಾರತ ಬಾರದಿದ್ದರೆ, ವಿಶ್ವಕಪ್ ಟೂರ್ನಿಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸೀಂ ಖಾನ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಟಿ20 ಹಾಗೂ ಟೆಸ್ಟ್ ಸರಣಿಗಳಿಗೆ ತಂಡವನ್ನು ಕಳುಹಿಸಲು ಮೊದಲು ನಿರಾಕರಿಸಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಂತರ ಒಪ್ಪಿಗೆ ನೀಡಿತ್ತು. ಇದಾದ ಬಳಿಕ ಈ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿಯ ಆತಿಥ್ಯವನ್ನು ಬಾಂಗ್ಲಾದೇಶಕ್ಕೆ ಬಿಟ್ಟುಕೊಡಲಾಗಿದೆ ಎಂದು ವದಂತಿಯಾಗಿತ್ತು. ಅಲ್ಲದೇ ಬಿಸಿಸಿಐಯು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡದಿರುವ ತನ್ನ ತೀರ್ಮಾನವನ್ನು ಸಡಿಲಗೊಳಿಸಲಿಲ್ಲ. ಹೀಗಾಗಿ ಏಷ್ಯಾಕಪ್ನ ಆತಿಥ್ಯ ವಹಿಸುವ ಹಕ್ಕನ್ನು ಪಾಕಿಸ್ತಾನ ಕಳೆದುಕೊಂಡಿದೆ ಎಂದು ಸುದ್ದಿಯಾಗಿತ್ತು.
ಈ ಎಲ್ಲಾ ವದಂತಿಗಳನ್ನು ತಳ್ಳಿಹಾಕಿರುವ ವಾಸೀಂ ಖಾನ್, ಇದು ಏಷ್ಯಾ ಕ್ರಿಕೆಟ್ ಮಂಡಳಿಯ ತೀರ್ಮಾನ. ಇದನ್ನು ಪಿಸಿಬಿಯಾಗಲಿ, ಐಸಿಸಿ ಆಗಲಿ ಬದಲಿಸಲು ಆಗುವುದಿಲ್ಲ. ನಾವು ಸದ್ಯ ಟೂರ್ನಿಯ ಆತಿಥ್ಯಕ್ಕಾಗಿ ಎರಡು ಸ್ಥಳಗಳನ್ನು ಅಂತಿಮಗೊಳಿಸಿದ್ದೇವೆ. ಒಂದು ವೇಳೆ ಭಾರತ ತಂಡ ಪಾಕಿಸ್ತಾನಕ್ಕೆ ಬಾರದಿದ್ದರೆ, 2021ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
2009ರ ಮಾರ್ಚ್ನಲ್ಲಿ ಟೆಸ್ಟ್ ಪಂದ್ಯವಾಡಲು ಲಾಹೋರ್ಗೆ ತೆರಳುತ್ತಿದ್ದ ವೇಳೆ ಶ್ರೀಲಂಕಾ ಆಟಗಾರರಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇದಾದ ನಂತರ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಬೇರೆ ರಾಷ್ಟ್ರಗಳ ತಂಡಗಳು ನಿರಾಕರಿಸಿದ್ದವು. ಈ ಕಾರಣದಿಂದಾಗಿ ಹಲವು ಟೂರ್ನಿಗಳ ಆತಿಥ್ಯ ಪಾಕಿಸ್ತಾನಕ್ಕೆ ದೊರಕಿಲ್ಲ.