ಮೆಲ್ಬೊರ್ನ್, ಜ 23 (DaijiworldNews/SM): ಹಲವು ಸಮಯಗಳಿಂದ ಟೆನಿಸ್ ನಿಂದ ದೂರವಿದ್ದು, ತಾಯಿಯಾದ ಬಳಿಕ ಇದೀಗ ಇದೇ ಮೊದಲ ಬಾರಿಗೆ ಟೆನಿಸ್ ಗೆ ಮರಳಿರುವ ಸಾನಿಯಾ ಮಿರ್ಜಾ ಅವರಿಗೆ ಮತ್ತೆ ನಿರಾಸೆ ಎದುರಾಗಿದೆ. ಮರಳಿ ಬಂದವರೇ ಟೂರ್ನಿಯಿಂದ ಹೊರನಡೆದಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯಲ್ಲಿ ಸಾನಿಯಾ ಮಿರ್ಜಾ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಟೂರ್ನಿಯಿಂದ ಅನಿವಾರ್ಯವಾಗಿ ಅವರು ಹೊರ ನಡೆದಿದ್ದಾರೆ. ಮಹಿಳಾ ಡಬಲ್ಸ್ ಪಂದ್ಯದಲ್ಲಿ ಕಳೆದ ವಾರವಷ್ಟೇ ಸಾನಿಯಾ ಹಾಗೂ ಉಕ್ರೇನ್ ನ ನಾದಿಯಾ ಕಿಚೇನೊಕ್ ಜೋಡಿ ಡಬ್ಲ್ಯುಟಿ ಇಂಟರ್ ನ್ಯಾಷನಲ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಇದೇ ಜೋಡಿ ಈ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯಲ್ಲಿ ಬುಧವಾರ ಗೆಲುವಿನ ಅಭಿಯಾನದ ಮುನ್ಸೂಚನೆಯೊಂದಿಗೆ ಕಣಕ್ಕಿಳಿದಿತ್ತು. ಆದರೆ ಚೀನಾದ ಶಿಂಯುಆನ್ ಹಾನ್ ಹಾಗೂ ಲಿನ್ ಜು ಅವರ ವಿರುದ್ಧದ ಪಂದ್ಯದಲ್ಲಿ ಅಂಕಗಳಿಕೆಯಲ್ಲಿ ನಿರೀಕ್ಷೆಯ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಹಾಗೂ ಈ ಹಿನ್ನಡೆಯೊಂದಿಗೆ ಸಾನಿಯಾ ಜೋಡಿ ಮೈದಾನದಿಂದಲೇ ಹೊರ ನಡೆದಿದೆ.