ನವದೆಹಲಿ, ಜ 22 (DaijiworldNews/SM): ಅಭೂತಪೂರ್ವ ಫಾರ್ಮನಲ್ಲಿರುವ ಟೀಂ ಇಂಡಿಯಾಕ್ಕೆ ಒಂದರ ಮೇಲೆ ಒಂದು ಶಾಕ್ ಎದುರಾಗುತ್ತಿದೆ. ಈಗಾಗಲೇ ಆಸಿಸ್ ವಿರುದ್ಧದ ಏಕದಿನ ಸರಣಿಯ ಸಂದರ್ಭ ಶಿಖರ್ ಧವನ್ ಹೊರಬಿದ್ದಿದ್ದಾರೆ. ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಶಿಕರ್ ಅಲಭ್ಯರಾಗಿದ್ದಾರೆ.
ಇನ್ನು ನ್ಯೂಜಿಲ್ಯಾಂಡ್ ವಿರುದ್ಧದ 2 ಟೆಸ್ಟ್ ಪಂದ್ಯಗಳಿಗೆ ಬೌಲಿಂಗ್ ವಿಭಾಗ ಭದ್ರಗೊಳಿಸಲು ಇಶಾಂತ್ ಶರ್ಮಾರನ್ನು ಆಯ್ಕೆ ಮಾಡಲಾಗಿತ್ತು. ಆದರೆ ರಣಜಿ ಟ್ರೋಫಿಯಲ್ಲಿ ದೆಹಲಿ ಪರವಾಗಿ ಇಶಾಂತ್ ಆಡುತ್ತಿದ್ದಾರೆ. ಈ ವೇಳೆ ಇಶಾಂತ್ ಗಾಯಗೊಂಡಿದ್ದಾರೆ. ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಇಶಾಂತ್ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯಕ್ಕೆ ಲಭ್ಯರಿಲ್ಲ.
ಈ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಅವರಿಗೆ ಸುಮಾರು 6 ವಾರಗಳ ವಿಶ್ರಾಂತಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 21ರಂದು ವೆಲ್ಲಿಂಗ್ಟನ್ ನಲ್ಲಿ ಆರಂಭವಾಗುವ 2 ಪಂದ್ಯಗಳ ಟೆಸ್ಟ್ ಸರಣಿಯಿಂದ ಇಶಾಂತ್ ಹೊರಬಿದ್ದಿದ್ದಾರೆ. ಎಂಆರ್ ಐ ಸ್ಕ್ಯಾನ್ ವರದಿಯಲ್ಲಿ ಇಶಾಂತ್ ಅವರ ಪಾದದಲ್ಲಿನ ಮಾಂಸಖಂಡದಲ್ಲಿ ಹರಿತ ಕಂಡುಬಂದಿದೆ. ಈ ಕಾರಣದಿಂದಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಇದೀಗ ಇಬ್ಬರು ಪ್ರಮುಖ ಆಟಗಾರರಿಲ್ಲದೆ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಇವರ ಹೊರತಾಗಿಯೂ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಭರವಸೆಯಿದ್ದು, ಇದಕ್ಕಾಗಿ ತಯಾರಿಗಳು ನಡೆಯುತ್ತಿವೆ.