ಮುಂಬೈ, ಜ.18 (Daijiworld News/PY) : ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಬಾಪು ನಾಡಕರ್ಣಿ ಅವರು ಮುಂಬೈಯ ಆಸ್ಪತ್ರೆಯಲ್ಲಿ ಜ.17 ಶುಕ್ರವಾರದಂದು ನಿಧನರಾಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.
ಬಾಪು ನಾಡಕರ್ಣಿ ಅವರಿಗೆ 86 ವರ್ಷ ವಯಸ್ಸಾಗಿದ್ದು, ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದರು. ಬಾಪು ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಬಾಪು ನಾಡಕರ್ಣಿ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಸತತ 21 ಮೇಡಿನ್ ಓವರ್ ಮಾಡಿದ ಖ್ಯಾತಿಗೆ ಭಾಜನರಾಗಿದ್ದರು.
ಎಡಗೈ ಬ್ಯಾಟ್ಸ್ಮನ್ ಹಾಗೂ ಬೌಲರ್ ಆಗಿರುವ ಬಾಪು ಅವರು 41 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಒಟ್ಟಾರೆ 1414 ರನ್ ಬಾರಿಸಿ 88 ವಿಕೆಟ್ಗಳನ್ನು ಪಡೆದಿದ್ದರು. 43 ರನ್ಗೆ 6 ವಿಕೆಟ್ ಪಡೆದಿದ್ದು ಬಾಪು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು.
ಮುಂಬೈನ ದೇಶಿಯ ಕ್ರಿಕೆಟ್ ದಿಗ್ಗಜರಾದ ಬಾಪು ನಾಡಕರ್ಣಿ ಅವರು 191 ಪ್ರಥಮ ದರ್ಜೆ ಪಂದ್ಯಗಳಲ್ಲಿ 8880 ರನ್ ಹಾಗೂ 500 ವಿಕೆಟ್ ಕಬಳಿಸಿದ್ದರು.