ನವದೆಹಲಿ, ಜ 16 (DaijiworldNews/SM): ಭಾರತ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ತನ್ನ ಮೊದಲ ಏಕದಿನ ಪಂದ್ಯದಲ್ಲಿ 10ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿ ಪಾರಮ್ಯ ಮೆರೆದಿದೆ. ನಾಳೆ ಎರಡನೇ ಏಕದಿನ ಪಂದ್ಯಾಟ ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಷಿಯೇಶನ್ ಮೈದಾನದಲ್ಲಿ ನಡೆಯಲಿದೆ.
ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಕೊಹ್ಲಿ ಬಳಗ ಸರಣಿಯನ್ನು ಜೀವಂತವಾಗಿರಿಸಲು ನಾಳೆ ನಡೆಯಲಿರುವ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಮೊದಲ ಪಂದ್ಯದಲ್ಲಿ ಕೇವಲ 255 ರನ್ ಗಳಿಸಿ ಸಾಧಾರಣ ಮೊತ್ತದ ಸ್ಪರ್ಧೆಯನ್ನು ಆಸ್ಟ್ರೇಲಿಯಾ ತಂಡಕ್ಕೆ ನೀಡಿತ್ತಾದರೂ ಬಲಿಷ್ಠ ಆಸ್ಟ್ರೇಲಿಯಾ ನೀರಸವಾಗಿ ಒಂದು ವಿಕೆಟ್ ನಷ್ಟವಿಲ್ಲದೆ ಗೆದ್ದು ಬೀಗಿತು.
ಮೊದಲ ಏಕದಿನದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಲವಾರು ಪ್ರಯೋಗಗಳನ್ನು ನಡೆಸಿ, ಅಪಾರ ಬೆಲೆ ತೆತ್ತರು. ಹಾಗಾಗಿ ಎರಡನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿರುವುದರಿಂದ ಯಾವುದೇ ಪ್ರಯೋಗಗಕ್ಕೆ ಮುಂದಾಗಲಾರರು.