ನವದೆಹಲಿ, ಜ 16(Daijiworld News/MSP): ಭಾರತೀಯ ಕ್ರಿಕೆಟ್ ತಂಡದ ಬಹುದೊಡ್ಡ ಇಳಿವಯಸ್ಸಿನ ಅಭಿಮಾನಿ ಚಾರುಲತಾ ಪಟೇಲ್ ತಮ್ಮ 87 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಚಾರುಲತಾ ಪಟೇಲ್ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರ ನಿಧನದ ಸುದ್ದಿಯನ್ನು ದೃಢಪಡಿಸಲಾಗಿದೆ.
ತಾಂಜೇನಿಯಾದಲ್ಲಿ ಹುಟ್ಟಿ ಇಂಗ್ಲೆಂಡಿನಲ್ಲಿ ನೆಲೆಸಿರುಂತಹ 87ರ ಹರೆಯದ ಭಾರತೀಯ ಮೂಲದ ಚಾರುಲತಾ ಪಟೇಲ್ ಅವರು ತನ್ನ 45ನೇ ವಯಸ್ಸಿನಲ್ಲಿ ಮೊದಲ ವಿಶ್ವಕಪ್ ನ್ನು ವೀಕ್ಷಿಸಿದ್ದರು. ಇದರ ಬಳಿಕ ತಪ್ಪದೇ ಭಾರತೀಯ ಕ್ರಿಕೆಟ್ ತಂಡ ಪಂದ್ಯಗಳನ್ನು ನೋಡುತ್ತಲೇ ಇದ್ದರು. ಕಳೆದ ಬಾರಿ ನಡೆದ ವಿಶ್ವಕಪ್ ನಲ್ಲಿ ವೀಲ್ಹ್ ಚೇರ್ ನಲ್ಲಿ ಕುಳಿತುಕೊಂಡಿದ್ದರೂ ಅವರು ವಿಸಿಲ್ ಹಾಕಿಕೊಂಡು ಭಾರತೀಯ ಕ್ರಿಕೆಟ್ ತಂಡವನ್ನು ಹುರಿದುಂಬಿಸುತ್ತಾ ತನ್ನ ಕ್ರಿಕೆಟ್ ಅಭಿಮಾನವನ್ನು ಪ್ರದರ್ಶಿಸುತ್ತಿದ್ದರು. ಇದು ಸಾಕಷ್ಟು ವೈರಲ್ ಆಗಿತ್ತು. ಅಭಿಮಾನಿ ಅಜ್ಜಿಯ ಉತ್ಸಾಹವನ್ನು ಕಂಡು ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನೂ ಬಳಿ ಬಂದು ಮಾತನಾಡಿ ಸಂತಸ ವ್ಯಕ್ತಪಡಿಸಿದ್ದರು.
ಜನವರಿ 13ರ ಸಂಜೆ 5.30ರ ಸುಮಾರಿಗೆ ಅವರು ವಿಧಿವಶರಾಗಿದ್ದಾರೆಂದು ಇನ್ಸ್ಟಾ ಗಾಂ ಖಾತೆಯಲ್ಲಿ ಬರೆಯಲಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಗುರುವಾರ ವಿರಾಟ್ ಅವರೊಂದಿಗಿರುವ ಚಾರುಲತಾ ಫೋಟೋವನ್ನು ಪೋಸ್ಟ್ ಮಾಡಿ ಟೀಮ್ ಇಂಡಿಯಾದ ಸೂಪರ್ ಫ್ಯಾನ್ ಚಾರುಲತಾ ಪಟೇಲ್ ಯಾವಾಗಲೂ ನಮ್ಮ ಹೃದಯದಲ್ಲಿರುತ್ತಾರೆ ಎಂದು ಬರೆದುಕೊಂಡಿದೆ.