ಮುಂಬೈ, ಜ 14(DaijiworldNews/SM): ಇತ್ತೀಚಿಗಷ್ಟೇ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಲ್ಲಿನ ಗೆಲುವಿನ ಬಳಿಕ ಹುಮ್ಮಸ್ಸಿನಲ್ಲಿದ್ದ ಟೀಂ ಇಂಡಿಯಾ ಆಸಿಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಹತ್ತು ವಿಕೆಟ್ ಗಳ ಹೀನಾಯ ಸೋಲನುಭವಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು.
ಆರಂಭಿಕರು ಅಲ್ಪಮೊತ್ತಕ್ಕೆ ತಮ್ಮ ವಿಕೆಟ್ ಒಪ್ಪಿಸಲಾರಂಭಿಸಿದರು. ಆರಂಭಿಕ ಆಟಗಾರ ಹಿಟ್ ಮ್ಯಾನ ರೋಹಿತ್ ಶರ್ಮಾ ಅಬ್ಬರಿಸುವ ಮುನ್ಸೂಚನೆ ನೀಡಿದರಾದರೂ ಕೇವಲ 10 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ತಂಡದ ಮೊತ್ತ ಒಂದಿಷ್ಟು ಚೇತರಿಕೆಗೆ ನೆರವಾದವರು, ಶಿಖರ್ ಧವನ್. 74 ರನ್ ಗಳಿಸಿ ತಂಡದ ಮೊತ್ತವನ್ನು ನೂರರ ಗಡಿದಾಟಿಸಿದರು. ಕನ್ನಡಿಗ ರಾಹುಲ್ 47 ರನ್ ಗಳಿಸಿದರು. ವಿರಾಟ್ ಕೊಹ್ಲಿ 16, ರಿಷಬ್ ಪಂತ್ 28, ರವೀಂದ್ರ ಜಡೇಜಾ 25 ರನ್ ಗಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ 49.1 ಓವರ್ ಗಳ ನಷ್ಟಕ್ಕೆ 255 ರನ್ ಗಳಿಗೆ ಸರ್ವ ಪತನಗೊಂಡಿತು.
ಭಾರತ ನೀಡಿದ್ದ 256 ರನ್ ಗಳ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 258 ರನ್ ಬಾರಿಸಿ ಭರ್ಜರಿ ಗೆಲುವು ದಾಖಲಿಸಿದೆ. ಆಸ್ಟ್ರೇಲಿಯಾ ಪರ ಆರಂಭಿಕರಾದ ಡೇವಿಡ್ ವಾರ್ನರ್ ಅಜೇಯ 128 ಮತ್ತು ಆರೋನ್ ಪಿಂಚ್ ಅಜೇಯ 110 ರನ್ ಬಾರಿಸಿ ಮಿಂಚಿದರು.
ಆಸ್ಟ್ರೇಲಿಯಾ ಪರ ಬೌಲಿಂಗ್ ನಲ್ಲಿ ಸ್ಟಾರ್ಕ್ 3, ಕಮ್ಮಿನ್ಸ್, ರಿಚರ್ಡ್ ಸನ್ ತಲಾ 2 ವಿಕೆಟ್ ಪಡೆದರು. ಇಂದಿನ ಗೆಲುವಿನ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.