ಮುಂಬೈ, ಜ 13 (DaijiworldNews/SM): ಈಗಾಗಲೇ ಹಲವು ಸರಣಿಗಳನ್ನು ಗೆದ್ದುಕೊಂಡಿರುವ ಭಾರತ ಕ್ರಿಕೆಟ್ ತಂಡ ಉತ್ತಮ ಫಾರ್ಮ್ ಕಾಯ್ದುಕೊಂಡಿದೆ. ಇದೀಗ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಸರಣಿಗೆ ಸಜ್ಜಾಗಿದ್ದು, ಮಂಗಳವಾರದಂದು ಮೊದಲ ಏಕದಿನ ಪಂದ್ಯ ನಡೆಯಲಿದೆ.
ಮಂಗಳವಾರದಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲನೇ ಪಂದ್ಯ ನಡೆಯಲಿದೆ. ಭಾರತ ಹಾಗೂ ಆಸಿಸ್ ನಡುವಿನ ಪಂದ್ಯ ಎಂದಾಕ್ಷಣ ಅಲ್ಲಿ ಸಹಜವಾಗಿಯೇ ವೀಕ್ಷಕರ ಸಂಖ್ಯೆ ಹೆಚ್ಚಾಗಿರುತ್ತದೆ. ಇನ್ನು ಕಳೆದ ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿದ್ದ ಕೊಹ್ಲಿ ಪಡೆ ಇದೀಗ ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ.
ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ಸರಣಿಯನ್ನು ಆಸಿಸ್ ತಂಡ ತಮ್ಮ ಕೈ ವಶಗೊಳಿಸಿತ್ತು. ಆರಂಭದ ಎರಡು ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದುಕೊಂಡಿತ್ತು. ಆದರೆ, ಬಳಿಕ ಸೋಲಿನ ಮುಖಭಂಗದಿಂದ ಪುಟಿದೆದ್ದಿದ್ದ ಆಸ್ಟ್ರೇಲಿಯಾ ತಂಡ ಸತತ ಮೂರೂ ಪಂದ್ಯಗಳನ್ನು ಗೆದ್ದು ಸರಣಿಯನ್ನು 3-2 ಅಂತರದಲ್ಲಿ ಗೆದ್ದುಕೊಂಡಿತ್ತು. ಅದೇ ಆತ್ಮ ವಿಶ್ವಾಸದೊಂದಿಗೆ ಇದೀಗ ಭಾರತ ತಂಡವನ್ನು ಎದುರಿಸಲು ಆಸಿಸ್ ಪಡೆ ಸಜ್ಜಾಗಿದೆ.
ಇನ್ನೊಂದೆಡೆ ಕಳೆದ ಸರಣಿ ಸೋತಿರುವ ಭಾರತ ಈ ಬಾರಿ ಶತಾಯಗತಾಯ ಸರಣಿ ಗೆಲ್ಲಲೇ ಬೇಕೆಂಬ ಹಠದಲ್ಲಿದೆ. ಅದಕ್ಕೆ ಪೂರಕ ಎಂಬಂತೆ ಸದ್ಯ ಟೀಂ ಇಂಡಿಯಾ ಉತ್ತಮ ಫಾರ್ಮ್ ಹೊಂದಿದ್ದು, ಬಹುತೇಕ ಸರಣಿ ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಆದರೆ, ಅತಿಯಾದ ಆತ್ಮವಿಶ್ವಾಸಹೊಂದಿದರೆ, ಆಸಿಸ್ ವಿರುದ್ಧದ ಹಾದಿ ಕಠಿಣವಾಗಿ ಪರಿಣಮಿಸಲಿದೆ.