ಪುಣೆ, ಜ 11 (DaijiworldNews/SM): ಭಾರತ ತಂಡದ ಆರಂಭಿಕರಾದ ಶಿಖರ್ ಧವನ್ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಆವರ ಅಮೋಘ ಬ್ಯಾಟಿಂಗ್ ನಿಂದಾಗಿ ಶ್ರೀಲಂಕಾ ವಿರುದ್ಧದ ಅಂತಿಮ ಪಂದ್ಯದಲ್ಲೂ ಗೆಲುವು ದಾಖಲಿಸಿ, 2-0 ಅಂತರದೊಂದಿಗೆ ಸರಣಿ ಸ್ವಾಧೀನಪಡಿಸಿಕೊಂಡಿದೆ. ಆ ಮೂಲಕ ಭಾರತ ತನ್ನ 2020ರ ವರ್ಷಾರಂಭವನ್ನು ಸರಣಿ ಜಯದ ಮೂಲಕ ಆರಂಭಿಸಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್ ಗಳಲ್ಲಿ 6ವಿಕೆಟ್ ಕಳೆದುಕೊಂಡು 201ರನ್ ಗಳಿಸಿತು. ಆರಂಭಿಕ ರಾಹುಲ್ 36 ಎಸೆತಗಳಲ್ಲಿ 54 ರನ್(5 ಬೌಂಡರಿ, 1ಸಿಕ್ಸರ್) ಮತ್ತು ಶಿಖರ್ ಧವನ್ 36 ಎಸೆತಗಳಲ್ಲಿ 52 ರನ್(7 ಬೌಂಡರಿ, 1ಸಿಕ್ಸರ್) ಮೊದಲ ವಿಕೆಟ್ ಜೊತೆಯಾಟದಲ್ಲಿ 97ರನ್ ಸೇರಿಸಿದ್ದು ತಂಡದ ಬ್ರಹತ್ ಮೊತ್ತಕ್ಕೆ ಅಡಿಪಾಯವಾಯಿತು. ಗುರಿ ಬೆನ್ನಟ್ಟಿದ ಪ್ರವಾಸಿ ಶ್ರೀಲಂಕಾ ತಂಡವು ಕೇವಲ 15.5 ಓವರ್ ಗಳಲ್ಲಿ 123 ರನ್ ಗಳಿಸಿ ಸರ್ವಪತನ ಕಂಡಿತು. ಭಾರತದ ಪರ ನವದೀಪ್ ಸೈನಿ 3, ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಗಳಿಸಿದರು.
ಟಾಸ್ ಗೆದ್ದು ಶ್ರೀಲಂಕಾ ತಂಡ ಭಾರತಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ಆರಂಭಿಕ ಭದ್ರ ಬುನಾದಿ ಪಡೆದುಕೊಂಡ ಭಾರತ ಮೂರನೇ ವಿಕೆಟ್ ಗೆ ನಾಯಕ ವಿರಾಟ್ ಕೊಹ್ಲಿ ತನ್ನ ಕ್ರಮಾಂಕವನ್ನು ವಿಕೆಟ್ ಕೀಪರ್ ಸಂಜು ಸ್ಮಾಮ್ಸನ್ ಅವರಿಗೆ ನೀಡಿದರು. ಸ್ಯಾಮ್ಸನ್ ಡಿಸಿಲ್ವಾ ಅವರ ಮೊದಲ ಎಸೆತವನ್ನು ಸಿಕ್ಸರ್ ಗೆ ಅಟ್ಟಿ ಎರಡನೇ ಎಸೆತದಲ್ಲಿ ಎಲ್ ಬಿಡಬ್ಲ್ಯು ಆದರು. ನಂತರ ಬಂದ ಮನೀಷ್ ಪಾಂಡೆ, ರಾಹುಲ್ ರೊಂದಿಗೆ ಬೇರೂರಿದರೂ ಇವರ ಆಟ ಹೆಚ್ಚು ಹೊತ್ತು ನಿಲ್ಲಲಿಲ್ಲ. ರಾಹುಲ್ ಸಂದಕನ್ ಅವರ ಎಸೆತವನ್ನು ಎದುರಿಸಲು ಸಾಧ್ಯವಾಗದೆ ಸ್ಟಂಪ್ ಔಟ್ ಆದರು. ಆಗ ಬಂದ ಶ್ರೆಯಸ್ ಅಯ್ಯರ್ ಒಂದು ಬೌಂಡರಿ ಹೊಡೆದು ಪೆವಿಲಿಯನ್ ಸೇರಿದರು. ಬಳಿಕ ನಾಯಕ ವಿರಾಟ್ ಕೊಹ್ಲಿ(26 ರನ್, 17 ಎಸೆತ, 2ಬೌಂಡರಿ, 1ಸಿಕ್ಸರ್) ಮತ್ತು ಮನೀಶ್ ಪಾಂಡೆ (ಅಜೇಯ 31ರನ್, 18ಎಸೆತ, 4ಬೌಂಡರಿ) 18ನೇ ಓವರ್ ವರೆಗೆ ಕ್ರೀಸ್ ನಲ್ಲಿ ನಿಂತು ಲಂಕಾ ಬೌಲರ್ ಗಳ ಬೆವರಿಳಿಸಿದರು. 18ನೇ ಓವರ್ ನಲ್ಲಿ ಕೊಹ್ಲಿ ಎರಡನೇ ರನ್ ಗಾಗಿ ಓಡುವ ಪ್ರಯತ್ನದಲ್ಲಿ ರನೌಟ್ ಆದರು. ಈ ವೇಳೆ ಬಂದ ಶಾರ್ದೂಲ್ ಠಾಕೂರ್ ಕೇವಲ 8 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಗಳೊಂದಿಗೆ ಅಜೇಯ 22 ರನ್ (1 ಬೌಂಡರಿ) ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.