ಪುಣೆ, ಜ 09 (DaijiworldNews/SM): ಟಿ-20 ಸರಣಿಗಾಗಿ ಭಾರತ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ಸರಣಿಯ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಶಿಯೇಷನ್ ಮೈದಾನದಲ್ಲಿ ಮೂರನೆ ಹಾಗೂ ಸರಣಿಯ ಅಂತಿಮ ಪಂದ್ಯಾಟ ನಾಳೆ ನಡೆಯಲಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಶ್ರೀಲಂಕಾ ಸರಣಿಯನ್ನು ಸಮಬಲಗೊಳಿಸಬೇಕಾದರೆ, ನಾಳೆ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಗುವಾಹಟಿಯಲ್ಲಿ ನಡೆದ ಮೊದಲ ಪಂದ್ಯ ಒಂದೂ ಎಸೆತ ಕಾಣದೆ ಮಳೆಗೆ ಆಹುತಿಯಾಗಿತ್ತು. ಇಂದೋರ್ ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಎರಡನೇ ಪಂದ್ಯದಲ್ಲಿ ಸೋತ ಶ್ರೀಲಂಕಾ ತಂಡ ಬೇಡವಾದ ವಿಶ್ವದಾಖಲೆಯನ್ನು ಬರೆದುಕೊಂಡಿತ್ತು. ಟಿ-20ಯಲ್ಲಿ ಅತೀ ಹೆಚ್ಚು ಸೋತ(62) ತಂಡವಾಗಿ ದಾಖಲೆ ಬರೆಯಿತು. ಇನ್ನು, 61 ಪಂದ್ಯ ಸೋತಿರುವ ವೆಸ್ಟ್ ಇಂಡೀಸ್ ಎರಡನೇ ಸ್ಥಾನದಲ್ಲಿದೆ. ಈ ದಾಖಲೆಯನ್ನು ಇಲ್ಲಿಗೆ ನಿಲ್ಲಿಸಬೇಕಾದರೆ, ಶ್ರೀಲಂಕಾ ತಂಡ ಅನಿವಾರ್ಯವಾಗಿ ಸರಣಿಯ ಮೂರನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ
ಭಾರತವೇ ಫೇವರೀಟ್ :
ಪುಣೆಯಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಭಾರತ ತಂಡವೇ ಗೆಲ್ಲುವ ಫೇವರೀಟ್ ತಂಡವಾಗಿದೆ. ಎರಡನೇ ಪಂದ್ಯದಲ್ಲಿ ಗೆಲುವಿನ ನಗೆ ಬೀರಿರುವ ಭಾರತ ತಂಡ, ಅಂತಿಮ ಪಂದ್ಯದಲ್ಲೂ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.