ಇಂದೋರ್, ಜ 07 (DaijiworldNews/SM): ಇಲ್ಲಿನ ಹೋಲ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾವನ್ನು ಮಣಿಸಿ ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದ ಭಾರತ ಶ್ರೀಲಂಕಾ ತಂಡಕ್ಕೆ ಬ್ಯಾಟಿಂಗ್ ನಡೆಸಲು ಆಹ್ವಾನ ನೀಡಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಲಂಕಾ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 142ರನ್ ಗಳ ಸಾಧರಣ ಮೊತ್ತ ಪೇರಿಸಿತು.
ಲಂಕಾ ಪರ ವಿಕೆಟ್ ಕೀಪರ್ ಕುಶಲ್ ಪೆರೆರಾ 34 ರನ್ ಗಳಿಸಿದರೆ, ಆರಂಭಿಕರಾದ ದನುಷ್ಕ ಗುಣತಿಲಕ 20 ಹಾಗೂ ಅವಿಷ್ಕ ಫೆರ್ನಾಂಡೊ 22 ರನ್ ಗಳಿಸಿದರು.ಉಳಿದಂತೆ ಯಾವೊಬ್ಬ ಆಟಗಾರರಿಂದಲೂ ನಿರೀಕ್ಷಿತ ಪ್ರದರ್ಶನ ಸಿಗಲಿಲ್ಲ. ಭಾರತದ ಪರ ಶಾರ್ದುಲ್ ಠಾಕೂರ್ 3, ನವದೀಪ್ ಹಾಗೂ ಕುಲ್ ದೀಪ್ ತಲಾ 2 ವಿಕೆಟ್ ಗಳನ್ನು ಪಡೆದರು.
ಇನ್ನು ಮಾಲಿಂಗ ಬಳಗದವರು ನೀಡಿದ ಸಾಧರಣ ಮೊತ್ತದ ಗುರಿ ಬೆನ್ನತ್ತಿದ ಕೊಹ್ಲಿ ಬಳಗಕ್ಕೆ ಉತ್ತಮ ಆರಂಭ ಸಿಕ್ಕಿತು. ಕನ್ನಡಿಗ ಲೋಕೇಶ್ ರಾಹುಲ್ 45 ರನ್ ಗಳನ್ನು ಸಿಡಿಸಿದರು. ಶಿಖರ್ ಧವನ್ 32 ರನ್ ಗಳನ್ನು ಪೇರಿಸಿದರು. ಶ್ರೇಯಸ್ ಅಯ್ಯರ್ 34 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 30 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 17.3 ಓವರ್ ಗಳಲ್ಲಿ ಟೀಂ ಇಂಡಿಯಾ 3 ವಿಕೆಟ್ ಗಳ ನಷ್ಟಕ್ಕೆ 144 ರನ್ ಗಳಿಸಿ ಗೆಲುವಿನ ನಗೆ ಬೀರಿತು.