ಇಂದೋರ್, ಜ 06 (DaijiworldNews/SM): ಮೂರು ಪಂದ್ಯಗಳ ಟಿ-20 ಸರಣಿಯ ಗುವಾಹಟಿಯಲ್ಲಿನ ಮೊದಲನೇ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಉಭಯ ತಂಡದ ಆಟಗಾರರ ಜತೆ ಅಭಿಮಾನಿ ಬಳಗಕ್ಕೂ ನಿರಾಸೆವುಂಟಾಗಿದೆ. ಈ ಹಿನ್ನೆಲೆಯಲ್ಲಿ ಎರಡನ್ನೇ ಪಂದ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಉಭಯ ತಂಡಗಳಿಗೆ ಎರಡನೇ ಪಂದ್ಯ ಗೆಲ್ಲುವುದು ಅನಿವಾರ್ಯವೆನಿಸಿದೆ.
ಮಂಗಳವಾರದಂದು ಹೋಲ್ಕರ್ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯವಾಡಲು ಭಾರತ-ಶ್ರೀಲಂಕಾ ಸಜ್ಜಾಗಿವೆ. ಭಾನುವಾರದಂದು ನಡೆಯಬೇಕಿದ್ದ ಮೊದಲ ಪಂದ್ಯಕ್ಕೆ ಮಳೆರಾಯ ಅಡ್ಡಿಯನ್ನುಂಟು ಮಾಡಿದ್ದ. ಟಾಸ್ ಗೆದ್ದು ಆಟ ಆರಂಭವಾಗಬೇಕೆನ್ನುವಷ್ಟರಲ್ಲಿ ಮಳೆರಾಯನ ಎಂಟ್ರಿಯಾಗಿತ್ತು. ಸಂಪೂರ್ಣ ಪಂದ್ಯವನ್ನೇ ಮಳೆರಾಯ ರದ್ದುಪಡಿಸುವಂತೆ ಮಾಡಿದ್ದ. ಪಿಚ್ ಮೇಲೆ ಹಾಕಿದ್ದ ಪ್ಲಾಸ್ಟಿಕ್ ಕವರ್ ಗಳಲ್ಲಿ ಸಣ್ಣ ರಂಧ್ರ ಇದ್ದ ಕಾರಣ ಪಿಚ್ ಕೂಡ ಹಲವು ಕಡೆ ತೇವಾಗಿತ್ತು. ತೇವ ಕಡಿಮೆ ಮಾಡಲು ಹೇರ್ ಡ್ರೈಯರ್ಸ್ ಕ್ರೀಡಾಂಗಣದ ಸಿಬ್ಬಂದಿ ಬಳಸಿದ್ದರು. ಸಾಕಷ್ಟು ಹರ ಸಾಹಸ ಮಾಡಿದರೂ ಒಂದೂ ಎಸೆತ ಕಾಣದೆ ಪಂದ್ಯ ರದ್ದಾಗಿದ್ದರಿಂದ ಹಾಜರಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟಾಯಿತು.
ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ಸರಣಿಗಳನ್ನು ಯಶಸ್ವಿಯಾಗಿ ಮುಗಿಸಿರುವ ಭಾರತ ತಂಡ ಲಘು ವಿರಾಮ ಪಡೆದು ಇದೀಗ ಶ್ರೀಲಂಕಾ ವಿರುದ್ಧದ ಚುಟುಕು ಸರಣಿಗೆ ಸಜ್ಜಾಗಿದೆ. ಈಗಾಗಲೇ ಮೊದಲನೇ ಪಂದ್ಯ ಮಳೆಗೆ ಆಹುತಿಯಾಗಿದ್ದು, ಇನ್ನುಳಿದ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶ ಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಬೌಲಿಂಗ್, ಬ್ಯಾಟಿಂಗ್ ಹಾಗೂ ಫಿಲ್ಡಿಂಗ್ ವಿಭಾಗದಲ್ಲೀ ಟೀಂ ಇಂಡಿಯಾ ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ. ಅದೇ ರೀತಿ ಭಾರತವನ್ನು ಮಣಿಸಿ ಸರಣಿ ಗೆಲ್ಲಬೇಕೆನ್ನುವುದು ಶ್ರೀಲಂಕಾ ಲೆಕ್ಕಾಚಾರ. ಆದ್ರೆ, ಟಿ-೨೦ ಸರಣಿ ಗೆಲ್ಲೋದ್ಯಾರು ಅನ್ನೋದು ಎರಡನೇ ಪಂದ್ಯದ ಬಳಿಕ ತಿಳಿಯಬಹುದಾಗಿದೆ.