ಗುವಾಹಟಿ, ಜ 06 (DaijiworldNews/SM): ವರ್ಷಾರಂಭದ ಮೊದಲ ಟ್ವಿ-20 ಪಂದ್ಯ ಮಳೆ ಪಾಲಾಗಿದೆ. ರವಿವಾರ ರಾತ್ರಿ ಗುವಾಹಟಿಯಲ್ಲಿ ನಡೆಯಬೇಕಿದ್ದ ಭಾರತ-ಶ್ರೀಲಂಕಾ ನಡುವಿನ ಮೊದಲ ಮುಖಾಮುಖಿ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕೊಹ್ಲಿ ಗೆಲುವಿನ ಉತ್ಸಾಹದಲ್ಲಿದ್ದರು. ಅದಾಗಲೇ ಮಳೆ ಸುರಿಯಲಾರಂಭಿಸಿತು. ಈ ಮಳೆಯ ಹೊಡೆತಕ್ಕೆ ಅಂಕಣವನ್ನು ದುರಸ್ತಿ ಮಾಡುವುದೇ ಕ್ಯುರೇಟರ್ ಗಳಿಗೆ ದೊಡ್ಡ ಸವಾಲಾಗಿತ್ತು. ಸಿಬ್ಬಂದಿಗಳು ಪಿಚ್ ದುರಸ್ತಿಗೆ ಪರದಾಡುತ್ತಿದ್ದರೆ, ಅಭಿಮಾನಿಗಳು ಮಾತ್ರ ತಾಳ್ಮೆ ಕಳೆದುಕೊಳ್ಳದೆ ಪಂದ್ಯಾರಂಭದ ನಿರೀಕ್ಷೆಯಲ್ಲಿದ್ದರು. ಆದರೆ, ಸುಮಾರು 9:30ರ ಸುಮಾರಿಗೆ ಪಂದ್ಯ ರದ್ದುಗೊಂಡಿದೆ ಎಂಬ ಮಾಹಿತಿ ಬಂದಾಗ ನಿರಾಸೆಯಿಂದ ಎದ್ದು ನಡೆದರು.
ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ಮಧ್ಯಮ ವೇಗಿ ಜಸ್ಪ್ರಿತ್ ಬೂಮ್ರಾ ಹಾಗೂ ಶಿಖರ್ ಧವನ್ ಕಣಕ್ಕಿಳಿಯಲು ಸಿದ್ಧರಾಗಿದ್ದರು. ಆದರೆ, ಮಳೆಯ ಅಡಚಣೆಯಿಂದಾಗಿ ಪಂದ್ಯ ಒಂದೂ ಎಸೆತ ಕಾಣದೆ ರದ್ದಾಯಿತು. ಸರಣಿಯ ದ್ವಿತೀಯ ಪಂದ್ಯ ಮಂಗಳವಾರ(ಜ.7) ಇಂದೋರ್ ನಲ್ಲಿ ನಡೆಯಲಿದೆ.