ಕೋಲ್ಕತ್ತ, ಜ 01 (DaijiworldNews/SM): ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ನಾಲ್ಕು ದಿನಗಳ ಟೆಸ್ಟ್ ಯೋಜನೆ ಜಾರಿಗೆ ತರಲು ಉದ್ದೇಶಿಸಿದ್ದು, ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಅಧ್ಯಕ್ಷ ಸೌರವ್ ಗಂಗೂಲಿ "ನಾಲ್ಕು ದಿನಗಳ ಟೆಸ್ಟ್ ಯೋಜನೆ ಬಗ್ಗೆ ಪ್ರತಿಕ್ರಿಯಿಸಲು ಇದು ಸಕಾಲವಲ್ಲ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗಂಗೂಲಿ, ‘ಐಸಿಸಿಯ ಪ್ರಸ್ತಾವನೆಯ ಬಗ್ಗೆ ಮಾಹಿತಿ ಇಲ್ಲ. ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು ನಂತರ ಮಾತನಾಡುತ್ತೇನೆ’ ಎಂದರು.
ಟೆಸ್ಟ್ ಚಾಂಪಿಯನ್ಷಿಪ್ನ ಭಾಗವಾಗಿ 2023ರಿಂದ 2031ರ ಅವಧಿಯಲ್ಲಿ ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳನ್ನು ಆಯೋಜಿಸಲು ಚಿಂತಿನೆ ನಡೆಸುತ್ತಿರುವುದಾಗಿ ಭಾನುವಾರ ಐಸಿಸಿ ಹೇಳಿತ್ತು.
ಪಂದ್ಯಗಳ ಆಯೋಜನೆಯ ವೆಚ್ಚ, ಆಟಗಾರರ ಮೇಲಿನ ಹೊರೆ ಕಡಿಮೆ ಮಾಡುವುದು ಹಾಗೂ ಟೆಸ್ಟ್ನತ್ತ ಹೆಚ್ಚು ಅಭಿಮಾನಿಗಳನ್ನು ಸೆಳೆಯುವ ಉದ್ದೇಶಗಳಿಂದ ಈ ತೀರ್ಮಾನ ಕೈಗೊಳ್ಳಲು ನಿರ್ಧರಿಸಿರುವುದಾಗಿಯೂ ಐಸಿಸಿ ತಿಳಿಸಿತ್ತು.
ಈ ೪ ದಿನಗಳ ಟೆಸ್ಟ್ ಪ್ರಸ್ತಾವನೆಗೆ ಈ ವರ್ಷ ಐಸಿಸಿ ಕ್ರಿಕೆಟ್ ಸಮಿತಿ ಅನುಮೋದನೆ ನೀಡುವ ನಿರೀಕ್ಷೆ ಇದೆ. ಐಸಿಸಿಯನ್ನು ಪ್ರತಿನಿಧಿಸುವ ಇತರ ಕ್ರಿಕೆಟ್ ಮಂಡಳಿಗಳ ಪ್ರತಿನಿಧಿಗಳು ಯೋಜನೆಯ ಪರ ಮತ ಚಲಾಯಿಸುವ ಸಾಧ್ಯತೆಯಿದೆ.
ಭಾರತದಲ್ಲಿ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸುವ ರಾಜ್ಯ ಸಂಸ್ಥೆಗಳಿಗೆ ಬಿಸಿಸಿಐ ದಿನದ ಲೆಕ್ಕದಲ್ಲಿ ಪಂದ್ಯದ ವೆಚ್ಚವನ್ನು ಸಂದಾಯ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ವೆಚ್ಚ ಅಧಿಕವಾಗಿದೆ ಎಂದು ಹೇಳಲಾಗಿದೆ.
2015ರಿಂದ 2023ರ ಅವಧಿಯಲ್ಲಿ ಒಟ್ಟು 335 ಟೆಸ್ಟ್ ಪಂದ್ಯಗಳು ನಡೆದಿವೆ. ಒಂದೊಮ್ಮೆ ಪಂದ್ಯಗಳ ಅವಧಿ ಕಡಿತಗೊಳಿಸಿದ್ದರೆ 335 ದಿನಗಳನ್ನು ಉಳಿಕೆಯಾಗುತ್ತಿತ್ತು ಎನ್ನಲಾಗಿದೆ.
ಇದು ಮೊದಲಲ್ಲ: ನಾಲ್ಕು ದಿನಗಳ ಟೆಸ್ಟ್, ಹೊಸ ಚಿಂತನೆಯೇನಲ್ಲ. 2019ರ ಆರಂಭದಲ್ಲಿ ಇಂಗ್ಲೆಂಡ್ ಮತ್ತು ಐರ್ಲೆಂಡ್ ತಂಡಗಳು ನಾಲ್ಕು ದಿನಗಳ ಟೆಸ್ಟ್ ಆಡಿದ್ದವು. 2017ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವೆಯೂ ಪಂದ್ಯ ಆಯೋಜನೆಯಾಗಿತ್ತು.
ಇಸಿಬಿ ಬೆಂಬಲ
ಲಂಡನ್ (ಪಿಟಿಐ): ಟೆಸ್ಟ್ ಪಂದ್ಯವನ್ನು ನಾಲ್ಕು ದಿನಗಳಿಗೆ ಕಡಿತಗೊಳಿಸುವ ಐಸಿಸಿಯ ಪ್ರಸ್ತಾವವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಸ್ವಾಗತಿಸಿದೆ.
‘ಐಸಿಸಿಯ ಈ ಯೋಜನೆಯಿಂದ ಆಟಗಾರರ ಮೇಲಿನ ಹೊರೆ ಕಡಿಮೆಯಾಗಲಿದೆ. ಟೆಸ್ಟ್ನತ್ತ ಪ್ರೇಕ್ಷಕರನ್ನು ಸೆಳೆಯಲೂ ಇದು ನೆರವಾಗಲಿದೆ’ ಎಂದು ಇಸಿಬಿ ಅಭಿಪ್ರಾಯಪಟ್ಟಿದೆ.