ನವದೆಹಲಿ, ಡಿ 26 (Daijiworld News/PY) : ಭಾರತದ ಟೆನಿಸ್ ದಿಗ್ಗಜ ಎಂದು ಹೆಸರು ಪಡೆದಿರುವ ಲಿಯಾಂಡರ್ ಪೇಸ್ ಮುಂದಿನ ವರ್ಷ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದಾರೆ.
ಬುಧವಾರದಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ಕ್ರಿಸ್ಮಸ್ ಶುಭಾಶಯ ಹೇಳುವ ಸಂದರ್ಭದಲ್ಲಿ, ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಸುಮಾರು ಮೂರು ದಶಕಗಳ ಕಾಲ ಟೆನಿಸ್ ಆಟ ಆಡುತ್ತಿರುವ 46 ವಯಸ್ಸಿನ ಲಿಯಾಂಡರ್ ಪೇಸ್ ಈ ಅವಧಿಯಲ್ಲಿ ಸಾರ್ವಕಾಲಿಕ ಶ್ರೇಷ್ಠ ಡಬಲ್ಸ್ ಆಟಗಾರರಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದವರಾಗಿದ್ದಾರೆ.
ಇಲ್ಲಿಯ ತನಕ 18 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳು ಸೇರಿದಂತೆ ಒಟ್ಟು 66 ಪ್ರಶಸ್ತಿಗಳು ಪೇಸ್ ಪಡೆದಿದ್ದಾರೆ.
ಈ ಸಂದರ್ಭ ತಮ್ಮ ಸಾಧನೆಯ ಹಾದಿಯುದ್ದಕ್ಕೂ ಪ್ರೋತ್ಸಾಹ ನೀಡಿದ ಹೆತ್ತವರಿಗೆ, ಕುಟಂಬದವರಿಗೆ, ಸ್ನೇಹಿತರಿಗೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
2020ನೇ ಸಾಲಿನಲ್ಲಿ ಕೇವಲ ಆಯ್ದ ಟೂರ್ನಿಗಳಲ್ಲಿ ಮಾತ್ರ ಭಾಗವಹಿಸುವುದಾಗಿ ಪೇಸ್ ಖಚಿತಪಡಿಸಿದ್ದಾರೆ.