ಕಟಕ್, ಡಿ 22 (DaijiworldNews/SM): ಭಾರತ ಹಾಗೂ ವಿಂಡೀಸ್ ನಡುವಿನ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ಗೆದ್ದುಕೊಂಡಿದೆ.
ಇಲ್ಲಿನ ಬಾರಬಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡ ಮೊದಲು ಬ್ಯಾಟಿಂಗ್ ಗೆ ಮುಂದಾಯಿತು. ಭಾರತಕ್ಕೆ ಗೆಲ್ಲಲು 316 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿತು. ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ನಾಲ್ಕು ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡ ಆರಂಭದಲ್ಲಿ ರನ್ ಪೇರಿಸಲು ಪರದಾಡಿತು. ಬಳಿಕ ನಿಕೋಲಸ್ ತಂಡಕ್ಕೆ 89 ರನ್ ಗಳ ಕೊಡುಗೆ ನೀಡಿದರು. ನಾಯಕ ಪೊಲಾರ್ಡ್ 74 ರನ್ ಗಳಿಸಿ ಅಜೆಯರಾಗಿ ಉಳಿದರು. ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ 5 ವಿಕೆಟ್ ಗಳ ನಷ್ಟಕ್ಕೆ 315 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ಭಾರತಕ್ಕೆ ನೀಡಿತು.
ಇನ್ನು ವಿಂಡೀಸ್ ನೀಡಿದ ಗುರಿ ಬೆನ್ನಟ್ಟಿದ ಟೀಂ ಇಂದಿಯಾಕ್ಕೆ ಆರಂಭಿಕ ಉತ್ತಮ ಅಡಿಪಾಯ ಹಾಕಿದರು. ರೋಹಿತ್ ಶರ್ಮಾ 63 ಹಾಗೂ ಲೋಕೇಶ್ ರಾಹುಲ್ 77 ರನ್ ಗಳ ಕೊಡುಗೆ ನೀಡಿದರು. ಬಳಿಕ ನಾಯಕ ವಿರಾಟ್ ಜವಾಬ್ದಾರಿಯ ಆಟ ಪ್ರದರ್ಶಿಸಿದರು. 85 ರನ್ ಗಳ ಕೊಡುಗೆ ನೀಡಿದರು. ಅಂತಿಮವಾಗಿ 39 ರನ್ ಗಳಿಸಿದ ರವೀಂದ್ರ ಜಡೇಜಾ ತಂಡವನ್ನು ಗೆಲುವಿನ ದಡ ಸೇರಿಸಿದರು. 48.4 ಓವರ್ ಗಳಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳ ನಷ್ಟಕ್ಕೆ 316 ರನ್ ಗಳಿಸಿ ಗೆಲುವಿನ ನಗೆ ಚೆಲ್ಲಿತು.