ವಿಶಾಖಪಟ್ಟಣಂ, ಡಿ 18 (DaijiworldNews/SM): ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯವನ್ನು ಸೋತುಕೊಂಡಿರುವ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಒಂದು ಹಂತದಲ್ಲಿ ತಪ್ಪುಗಳನ್ನು ತಿದ್ದಿಕೊಂಡಿದ್ದು, ಪಂದ್ಯವನ್ನು 107 ರನ್ ಗಳ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಆ ಮೂಲಕ ಸರಣಿಯನ್ನು 1-1ರಿಂದ ಸಮಬಲಗೊಳಿಸಿ ಜೀವಂತವಾಗಿರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ಭಾರತದ ಆರಂಭಿಕ ಆಟಗಾರರು ವಿಂಡೀಸ್ ಬೌಲರ್ ಗಳ ಮುಂದೆ ಘರ್ಜಿಸಿದರು. ಮೈದಾನದ ಮೂಲೆ ಮೂಲೆಗಳಿಗೆಚೆಂಡನ್ನು ಅಟ್ಟಿದರು. ಭರ್ಜರಿ ಇನ್ನಿಂಗ್ಸ್ ನಲ್ಲಿ ಹಿಟ್ ಮ್ಯಾನ್ ರೋಹಿತ್ ಅಬ್ಬರಿಸಿ 159 ರನ್ ಗಳ ಕೊಡುಗೆ ನೀಡಿದರೆ, ಕನ್ನಡಿಗ ಕೆ.ಎಲ್. ರಾಹುಲ್ ಕೂಡ 102ರನ್ ಗಳ ಕೊಡುಗೆ ನೀಡಿದರು. ಆ ಮೂಲಕ ಟೀಂ ಇಂಡಿಯಾ ಬೃಹತ್ ಮೊತ್ತದ ಸೂಚನೆ ನೀಡಿತು.
ಆರಂಭಿಕರು ನಿರ್ಗಮಿಸಿದ ಬಳಿಕ ಶ್ರೆಯಸ್ ಐಯರ್ ಆರ್ಭಟಿಸಿದರು. ಕೇವಲ 32 ಎಸೆತಗಳಲ್ಲಿ 53 ರನ್ ಗಳನ್ನು ಸಿಡಿಸಿದರು. ಬಳಿಕ ರಿಷಬ್ ಪಂತ್ 39 ರನ್ ಗಳನ್ನು ಸಿಡಿಸಿದರು. ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅಂತಿಮವಾಗಿ ಟೀಂ ಇಂಡಿಯಾ 50 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 387 ರನ್ ಗಳ ಬೃಹತ್ ಮೊತ್ತ ದಾಖಲಿಸಿತು. ಭಾರತದ ಇನ್ನಿಂಗ್ಸ್ ನಲ್ಲಿ 16 ಭರ್ಜರಿ ಸಿಕ್ಸರ್ ಗಳು ದಾಖಲಾದವು.
ಇನ್ನು ಭಾರತ ನೀಡಿದ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಒಂದಿಷ್ಟು ಭರವಸೆ ಮೂಡಿಸಿದರು. ಆದರೆ, ಭಾರತದ ಬೌಲರ್ ಗಳ ಮುಂದೆ ಅವರ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಶಯಿ ಹೋಪ್ 78 ರನ್ ಗಳನ್ನು ಸಿಡಿಸಿದರು. ಇನ್ನು ನಿಕೋಲಸ್ 75 ರನ್ ಸಿಡಿಸಿದರು. ಉಳಿದಂತೆ ಎಲ್ಲಾ ಆಟಗಾರ ಕೂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅಂತಿಮ ಹಂತದಲ್ಲಿ ಪೌಲ್ ಒಂದಿಷ್ಟು ನಿರೀಕ್ಷೆ ಮೂಡಿಸಿದರಾದರೂ ಗೆಲುವು ಮಾತ್ರ ಕನಸಿನ ಮಾತಾಗಿತ್ತು. ಅಂತಿಮವಾಗಿ 43.3 ಓವರ್ ಗಳಲ್ಲಿ 280 ರನ್ ಗಳಿಸಿದ ವಿಂಡೀಸ್ ತಂಡ ತನ್ನೆಲ್ಲ ವಿಕೆಟ್ ಕಳೆದುಕೊಂಡು ಭಾರತಕ್ಕೆ ಶರಣಾಯಿತು.