ಚೆನ್ನೈ, ಡಿ 13 (DaijiworldNews/SM): ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಮಯಾಂಕ್ ಅಗರ್ವಲ್ ವಿಂಡೀಸ್ ವಿರುದ್ಧದ ಏಕದಿನ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಆರಂಭಿಕ ಆಟಗಾರ ಶಿಖರ್ ಧವನ್ ತಂಡದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಮಯಾಂಕ್ ಅವರನ್ನು ಆಯ್ಕೆ ಮಾಡಲಾಗಿದೆ.
ದೀರ್ಘ ಅವಧಿ ಕ್ರಿಕೆಟ್ನಲ್ಲಿ ತಮ್ಮ ಸಾಮರ್ಥ್ಯ ಸಾಭೀತುಪಡಿಸಿರುವ ಕನ್ನಡಿಗ ಮಯಾಂಕ್ ಸೀಮಿತ ಓವರ್ ಕ್ರಿಕೆಟ್ ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಸಿದ್ದರಾಗಿದ್ದಾರೆ. ಈಗಾಗಲೇ ಟೆಸ್ಟ್ ಕ್ರಿಕೆಟ್ ನಲ್ಲಿ ಯಶಸ್ವಿಯಾಗಿರುವ ಅವರು ಏಕದಿನ ಕ್ರಿಕೆಟ್ ನಲ್ಲೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ.
ಮಯಾಂಕ್ ಅಗರ್ವಾಲ್ ಇದುವರೆಗೂ ಆಡಿರುವ 9 ಟೆಸ್ಟ್ ಪಂದ್ಯಗಳಲ್ಲಿ ಎರಡು ದ್ವಿಶತಕ ಸೇರಿದಂತೆ ಮೂರು ಶತಕಗಳು ಹಾಗೂ ಹಲವು ಅರ್ಧಶತಕಗಳನ್ನು ಸಿಡಿಸಿದ್ದಾರೆ. 67.07ರ ಸರಾಸರಿಯಲ್ಲಿ 872 ರನ್ ಗಳಿಸಿದ್ದಾರೆ.
‘ದೇಶೀಯ ಕ್ರಿಕೆಟ್ನಲ್ಲಿ ಈ ಎಲ್ಲ ಮಾದರಿಗಳಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಬೇರೆ-ಬೇರೆ ಮಾದರಿಯಲ್ಲಿ ಆಡುವುದು ಮನಸ್ಥಿತಿಗೆ ಬಿಟ್ಟ ವಿಚಾರ. ಆಟದ ಬಗ್ಗೆ ತಂತ್ರಗಾರಿಕೆ ಹಾಗೂ ನಿಖರತೆ ಇದ್ದರೆ, ಯಾವುದೇ ಮಾದರಿಯಲ್ಲೂ ಹೊಂದಾಣಿಕೆ ಸಾಧಿಸಬಹುದು,’’ ಎಂದು ಹೇಳಿದರು.
ಆ ಮೂಲಕ ಏಕದಿನ ಕ್ರಿಕೆಟ್ ನಲ್ಲೂ ತಾನು ಉತ್ತಮ ಪ್ರದರ್ಶನ ನೀಡುವೆ ಎಂಬುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ರೋಹಿತ್ ಶರ್ಮಾ ಅವರೊಂದಿಗೆ ಮೈದಾನಕ್ಕೆ ಇಳಿಯಲು ರೆಡಿಯಾಗಿರುವ ಅವರು ಆರಂಭದಲ್ಲಿ ಹೊಂದಿಕೊಳ್ಳಲು ಒಂದಿಷ್ಟು ಕಷ್ಟವಾಗಬಹುದು. ಒಂದೊಮ್ಮೆ ಹೊಂದಿಕೊಂಡಲ್ಲಿ ಉತ್ತಮ ಆರಂಭ ನೀಡಲು ಸಾಧ್ಯವಾಗಲಿದೆ. ಆದರೆ, ಮಯಾಂಕ್ ಯಾವ ರೀತಿಯಲ್ಲಿ ಪ್ರದರ್ಶನ ನೀಡಲಿದ್ದಾರೆ ಎನ್ನುವುದಕ್ಕೆ ರವಿವಾರದ ಪಂದ್ಯದಲ್ಲಿ ಉತ್ತರ ಸಿಗಲಿದೆ.