ಮುಂಬೈ, ಡಿ 12 (DaijiworldNews/SM): ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ವಿಂಡೀಸ್ ವಿರುದ್ಧದ ಸರಣಿಯನ್ನು ಭಾರತ ಕೈವಶಗೊಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಅವರ ಬ್ಯಾಟಿಂಗ್ ಮುಂದೆ ವಿಂಡೀಸ್ ಬೌಲರ್ ಗಳ ಆಟ ನಡೆಯಲಿಲ್ಲ. ಮೈದಾನದ ಮೂಲೆ ಮೂಲೆಗಳಿಗೆ ಚೆಂಡನ್ನು ಅಟ್ಟುವ ಮೂಲಕ ವಿಂಡೀಸ್ ಬೌಲರ್ ಗಳ ಬೆವರಿಳಿಸಿದರು.
34 ಎಸೆತಗಳನ್ನು ಎದುರಿಸಿದ ರೋಹಿತ್ 71 ರನ್ ಗಳನ್ನು ಗಳಿಸಿದರು. ಇನ್ನು ವಿಂಡೀಸ್ ವಿರುದ್ಧ ಅಬ್ಬರಿಸಿದ ಕನ್ನಡಿಗ ಕೆ.ಎಲ್. ರಾಹುಲ್ 91 ರನ್ ಗಳಿಸಿದರು. ಇನ್ನು ನಾಯಕನಾಟವಾಡಿದ ಕೊಹ್ಲಿ ವಿರಾಟ ರೂಪ ಪ್ರದರ್ಶಿಸಿದರು. ಕೇವಲ 29 ಎಸೆತಗಳಲ್ಲಿ 70 ರನ್ ಗಳಿಸಿದರು. ಅಂತಿಮವಾಗಿ ಟೀಂ ಇಂದಿಯಾ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿದರು.
ಇನ್ನು ಭಾರತ ನೀಡಿದ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ವಿಂಡೀಸ್ ತಂಡಕ್ಕೆ ಆರಂಭದಲ್ಲೇ ಆಘಾತ ಉಂಟಾಯಿತು. ಆರಂಭಿಕರು ಎರಡಂಕಿ ದಾಟುವ ಮುನ್ನವೇ ನಿರ್ಗಮಿಸಿದರು. ನಾಯಕನ ಆಟ ಪ್ರದರ್ಶಿಸಿದ ಕೆರನ್ ಪೊಲಾರ್ಡ್ ೬೮ ರನ್ ಗಳ ಕಾಣಿಕೆ ತಂದಕ್ಕೆ ನೀಡಿ ತಂಡದ ಮೊತ್ತ ಹೆಚ್ಚಳಕ್ಕೆ ನೆರವಾದರು.
ಅಂತಿಮವಾಗಿ 20 ಓವರ್ ಗಳಲ್ಲಿ ವಿಂಡೀಸ್ ತಂಡ ೮ ವಿಕೆಟ್ ಗಳನ್ನು ಕಳೆದುಕೊಂಡು 173 ರನ್ ಗಳನ್ನು ಗಳಿಸಿ ಸೋಲನುಭವಿಸಿತು. ಆ ಮೂಲಕ ಭಾರತ ವಿಂಡೀಸ್ 2-1 ಅಂತರದಿಂದ ಗೆದ್ದುಕೊಂಡಿದೆ.