ತಿರುವನಂತಪುರ, ಡಿ 12 (DaijiworldNews/SM): ಎರಡನೇ ಟಿ-20 ಪಂದ್ಯದಲ್ಲಿ ಭಾರತ ವಿರುದ್ಧ ಗೆಲುವು ದಾಖಲಿಸುವ ಮೂಲಕ ವೆಸ್ಟ್ ಇಂಡೀಸ್ ತಂಡ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ.
ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ವಿಂಡೀಸ್ ತಂಡ ಟೀಂ ಇಂಡಿಯಾವನ್ನು 8ವಿಕೆಟ್ ಗಳಿಂದ ಮಣಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 170 ರನ್ ಪೇರಿಸಿತು. ಭಾರತದ ಪರ ಶಿವಂ ದುಬೆ 54 ರನ್ ಸಿಡಿಸಿದರು. ರಿಷಬ್ ಪಂತ್ ಔಟಾಗದೆ 33 ರನ್ ಸಿಡಿಸಿದರು. ಉಳಿದ ಯಾವೊಬ್ಬ ಆಟಗಾರರಿಂದಲೂ ನಿರೀಕ್ಷಿತ ಪ್ರದರ್ಶನ ದೊರೆಯಲಿಲ್ಲ. ಅಂತಿಮವಾಗಿ 170 ರನ್ ಗಳಿಸಲಷ್ಟೇ ಟೀಂ ಇಂಡಿಯಾ ಶಕ್ತವಾಯಿತು.
ಇನ್ನು ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ತಂಡಕ್ಕೆ ಉತ್ತಮ ಆರಂಭ ದೊರಕಿತು. ಆರಂಭಿಕ ಆಟಗಾರರಾದ ಸಿಮೊನ್ಸ್ 67 ರನ್ ಸಿಡಿಸಿದರು. ಇವಿನ್ ಲೆವಿಸ್ 40 ರನ್ ಸಿಡಿಸಿದರು. ಅಂತಿಮವಾಗಿ 18.3 ಓವರ್ ಗಳಲ್ಲಿ ವಿಂಡೀಸ್ ತಂಡ 173 ರನ್ ಗಳನ್ನು ಗಳಿಸಿ ವಿಜಯದ ನಗೆ ಬೀರಿತು.
ಮೊದಲ ಪಂದ್ಯದಲ್ಲಿ ಮಾಡಿದ ತಪ್ಪು ಗಳನ್ನು ತಿದ್ದಿಕೊಂಡ ಪರಿಣಾಮ ವಿಂಡೀಸ್ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ಆದರೆ, ಟೀಂ ಇಂಡಿಯಾದ ಅತಿಯಾದ ಆತ್ಮ ವಿಶ್ವಾಸ ಎರಡನೇ ಪಂದ್ಯದಲ್ಲಿ ಸೋಲಿಗೆ ಕಾರಣವಾಯಿತು.