ಹೈದರಾಬಾದ್, ಡಿ 05 (DaijiworldNews/SM): ಭಾರತ ಕ್ರಿಕೆಟ್ ತಂಡ ಕಂಡ ಅತ್ಯಂತ ಶ್ರೇಷ್ಠ ಆಟಗಾರ ಮಹೇಂದ್ರ ಸಿಂಗ್ ಧೋನಿಯವರ ದಾಖಲೆಯೊಂದನ್ನು ಮುರಿಯಲು ಯುವ ಆಟಗಾರ್ ವಿಕೆಟ್ ಕೀಪರ್ ರಿಷಬ್ ಪಂತ್ ತುದಿಗಾಲಲ್ಲಿ ನಿಂತಿದ್ದಾರೆ.
ಡಿಸೆಂಬರ್ 6ರಂದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಮೊದಲ ಟಿ-20 ಸರಣಿ ಆರಂಭಗೊಳ್ಳಲಿದೆ. ಈ ಸರಣಿಯಲ್ಲಿ ಧೋನಿಯವರನ್ನು ಹಿಂದಿಕ್ಕುವ ಹುಮ್ಮಸ್ಸಿನಲ್ಲಿದ್ದಾರೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಟಿ-20 ಕ್ರಿಕೆಟ್ ನಲ್ಲಿ ವಿಕೆಟ್ ಹಿಂದೆ ಹೆಚ್ಚು ವಿಕೆಟ್ ಪಡೆದವರಲ್ಲಿ ಮಾಜಿ ನಾಯಕ ಧೋನಿ ಮೊದಲಿಗರಾಗಿದ್ದಾರೆ. ಧೋನಿಯವರನ್ನು ಹಿಂದಿಕ್ಕಲು ಪಂತ್ ಗೆ ಮೂರು ಬಲಿಗಳು ಬೇಕಾಗಿವೆ. ಈಗಾಗಲೇ ಪಂತ್ ವಿಂಡೀಸ್ ವಿರುದ್ಧ ಏಳು ಪಂದ್ಯಗಳಿಂದ ೩ ಬಲಿ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ಧೋನಿ ಏಳು ಪಂದ್ಯಗಳಿಂದ ಐದು ಬಲಿಪಡೆದುಕೊಂಡಿದ್ದಾರೆ. ಆ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಭಾರತ ಮೂರು ಟಿ-20 ಪಂದ್ಯಗಳಾಡಲಿದ್ದು, ಪಂತ್ಗೆ ಧೋನಿ ದಾಖಲೆ ಮುರಿಯಲು ಅತ್ಯುತ್ತಮ ಅವಕಾಶವಿದೆ. ಈ ಪಟ್ಟಿಯಲ್ಲಿ ಮಾಜಿ ವಿಂಡೀಸ್ ವಿಕೆಟ್ ಕೀಪರ್ ದಿನೇಶ್ ರಾಮ್ದಿನ್ ಐದು ಬಲಿ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಆ್ಯಂಡ್ರೆ ಫ್ಲೆಚರ್ (4) ಮೂರನೇ ಸ್ಥಾನ ಹಾಗೂ ದಿನೇಶ್ ಕಾರ್ತಿಕ್ (3) ನಾಲ್ಕನೇ ಸ್ಥಾನದಲ್ಲಿದ್ದಾರೆ.