ದುಬೈ, ಡಿ 4 (Daijiworld News/ MB) : ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಬುಧವಾರ ಪ್ರಕಟ ಮಾಡಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ.
ವಿರಾಟ್ ಕೊಹ್ಲಿ ರ್ಯಾಂಕಿಂಗ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದು ಈಗ ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾಗ ಸ್ಟೀವ್ ಸ್ಮಿತ್ ಗಿಂತ ಕೇವಲ 3 ಪಾಯಿಂಟ್ ಹಿಂದಿದ್ದರು.
ಕೊಹ್ಲಿ ಇತ್ತೀಚಿಗೆ ಬಾಂಗ್ಲಾದೇಶ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆದ ಡೇ-ನೈಟ್ ಟೆಸ್ಟ್ನಲ್ಲಿ 136 ರನ್ ಬಾರಿಸಿದ್ದು ಒಟ್ಟು 928 ಅಂಕಗಳನ್ನು ಗಳಿಸಿದ್ದಾರೆ. ಆದರೆ ಸ್ಟೀವ್ ಸ್ಮಿತ್ ಪಾಕಿಸ್ತಾನ ವಿರುದ್ಧದ ದ್ವಿತೀಯ ಟೆಸ್ಟ್ನಲ್ಲಿ ಕೇವಲ 36 ರನ್ ಗಳಿಸಿದ್ದು 931 ಅಂಕಗಳಿಂದ 923 ಅಂಕಗಳಿಗೆ ಕುಸಿದಿದ್ದು ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಆಡಲಿದ್ದು ಈ ವರ್ಷ ಒಂದನೇ ಸ್ಥಾನ ಅವರದ್ದೇ ಆಗಿ ಉಳಿಯಲಿದೆ.
ಇನ್ನು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನದಲ್ಲಿದ್ದು 877 ಅಂಕ ಗಳಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ಚೇತೇಶ್ವರ ಪೂಜಾರ 791, ಐದನೇ ಸ್ಥಾನದಲ್ಲಿರುವ ಡೇವಿಡ್ ವಾರ್ನರ್ 764 ಹಾಗೂ ಆರನೇ ಸ್ಥಾನದಲ್ಲಿರುವ ಅಂಜಿಕ್ಯಾ ರಹಾನೆ 759 ಅಂಕಗಳನ್ನು ಪಡೆದಿದ್ದಾರೆ.
ಭಾರತ ತಂಡ ರ್ಯಾಂಕಿಂಗ್ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದ್ದು ಎರಡನೇ ಸ್ಥಾನದಲ್ಲಿ ನ್ಯೂಜಿಲೆಂಡ್, ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್, ನಾಲ್ಕನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಐದನೇ ಸ್ಥಾನದಲ್ಲಿದ್ದು ಟಾಪ್ 5 ಸ್ಥಾನ ತನ್ನದಾಗಿಸಿಕೊಂಡಿದೆ.
ಹಾಗೆಯೇ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ 900 ಅಂಕ ಗಳಿಸಿ ಅಗ್ರ ಸ್ಥಾನ, ದಕ್ಷಿಣ ಆಫ್ರಿಕಾದ ಕಾಗಿಸೋ ರಬಾಡ 839 ಅಂಕ , ವೆಸ್ಟ್ ಇಂಡೀಸ್ನ ಜೇಸನ್ ಹೋಲ್ಡರ್ 830 ಅಂಕ, ನ್ಯೂಜಿಲೆಂಡ್ನ ನೇಲ್ ವ್ಯಾಗ್ನರ್ 814 ಅಂಕ, ಭಾರತದ ಜಸ್ಪ್ರೀತ್ ಬೂಮ್ರಾ 794 ಅಂಕ ಟಾಪ್ 5 ರಲ್ಲಿ ಸ್ಥಾನ ಪಡೆದಿದ್ದಾರೆ.