ಅಡಿಲೇಡ್, ಡಿ 1 (Daijiworld News/MB) : ಪಾಕಿಸ್ತಾನದ ಲೆಗ್ ಸ್ಪಿನ್ನರ್ ಯಾಸಿರ್ ಶಾ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ವೃತ್ತಿ ಜೀವನದ ಮೊದಲ ಶತಕ ಸಿಡಿಸಿದ್ದಾರೆ.
33 ವರ್ಷದ ಸ್ಪಿನ್ ಬೌಲರ್ ಯಾಸಿರ್ ಶಾ ಆಡಿದ ಹಿಂದಿನ 36 ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ 42 ರನ್ ಗಳಿಸಿದ್ದು ಆದರೆ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ 113 ರನ್(213 ಎಸೆತ, 13 ಬೌಂಡರಿ) ಹೊಡೆದು ಕೊನೆಯವರಾಗಿ ಔಟಾದರು.
ಪಾಕಿಸ್ತಾನ 31.5 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿದ್ದು ಯಾಸಿರ್ ಶಾ ಬಾಬರ್ ಅಜಂ ಜೊತೆಗೂಡಿ 7ನೇ ವಿಕೆಟಿಗೆ 105 ರನ್ ಜೊತೆಯಾಟವಾಡಿ ಪಾಕ್ ರನ್ ಹೆಚ್ಚಾಗಲು ಕಾರಣವಾದರು. ಬಾಬರ್ ಅಜಂ 97 ರನ್(132 ಎಸೆತ, 11 ಬೌಂಡರಿ) ಹೊಡೆದರೆ, ಬೌಲರ್ ಮೊಹಮ್ಮದ್ ಅಬ್ಬಾಸ್ 29 ರನ್ ಹೊಡೆದರು. ಅಂತಿಮವಾಗಿ ಪಾಕಿಸ್ತಾನ 94.4 ಓವರ್ ಗಳಲ್ಲಿ 302 ರನ್ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಫಾಲೋಆನ್ಗೆ ತುತ್ತಾಗಿದೆ.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಔಟಾಗದೆ 335 ರನ್( 418 ಎಸೆತ, 39 ಬೌಂಡರಿ, 1 ಸಿಕ್ಸರ್), ಲಬುಶೇನ್ 162 ರನ್(238 ಎಸೆತ, 22 ಬೌಂಡರಿ) ಸಹಾಯದಿಂದ ಮೂರು ವಿಕೆಟ್ ನಷ್ಟಕ್ಕೆ 589 ರನ್ ಸಿಡಿಸಿ 127 ಓವರ್ ನಲ್ಲಿ ಡಿಕ್ಲೇರ್ ಘೋಷಣೆ ಮಾಡಿತ್ತು.