ಪುಣೆ, ನ 26 (DaijiworldNews/SM): ಈ ವರ್ಷದಲ್ಲಿ ಭಾರತೀಯ ಶೂಟರ್ ಗಳು ನಿರೀಕ್ಷೆಯನ್ನು ಮೀರಿ ಪ್ರದರ್ಶನ ನೀಡಿದ್ದಾರೆ. ವರ್ಷಾಂತ್ಯದಲ್ಲಿ ಬಿಡುಗಡೆಯಾಗಿರುವ ವಿಶ್ವ ಶ್ರೇಯಾಂಕದಲ್ಲಿ ಭಾರತೀಯ ಮೂವರು ಶೂಟರ್ ಗಳು ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಆ ಮೂಲಕ ಇಂಟರ್ ನ್ಯಾಷನಲ್ ಶೂಟಿಂಗ್ ಫೆಡರೇಷನ್ ನೀಡುವ 'ದಿ ಗೋಲ್ಡನ್ ಟಾರ್ಗೆಟ್' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತದ ದಿವ್ಯಾಂಶ್ ಸಿಂಗ್ ಪನ್ವಾರ್ ಹಾಗೂ ಎಲವೆನಿಲ್ ವಲರಿವನ್ ಅವರು ಕ್ರಮವಾಗಿ ಪುರುಷ ಹಾಗೂ ಮಹಿಳೆಯರ 10ಮೀ. ರೈಫಲ್ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.
ಮತ್ತೊಂದೆಡೆ ಪಿಸ್ತೂಲ್ ನಲ್ಲಿ ಅನುಭವಿ ಸೌರಭ್ ಚೌಧರಿ ವರ್ಷಾಂತ್ಯದಲ್ಲಿ ಏರ್ ಪಿಸ್ತೂಲ್ ವಿಭಾಗದ ಶ್ರೇಯಾಂಕದಲ್ಲಿ ಅಗ್ರ ಸ್ಥಾನದೊಂದಿಗೆ ತಮ್ಮ ಅಭಿಯಾನ ಮುಗಿಸಿದ್ದಾರೆ. ಈ ಮೂವರು ದಿ ಗೋಲ್ಡನ್ ಟಾರ್ಗೆಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ವರ್ಷದಿಂದಲೇ ಐಎಸ್ಎಸ್ಎಫ್ ಅಗ್ರ ಶ್ರೇಯಾಂಕ ಪಡೆದ ಅಥ್ಲಿಟ್ಗಳಿಗೆ 'ದಿ ಗೋಲ್ಡನ್ ಟಾರ್ಗೆಟ್' ಪ್ರಶಸ್ತಿ ನೀಡಲು ನಿರ್ಧಾರವಾಗಿದೆ. ಈಗಾಗಲೇ ಶೂಟಿಂಗ್ ನಲ್ಲಿ ಹನ್ನೆರಡು ವಿಭಾಗಗಳಲ್ಲಿ ಉತ್ತಮ ಪ್ರದರ್ಶನದೊಂದಿಗೆ ಅಗ್ರ ಸ್ಥಾನ ಪಡೆದಿರುವವರಿಗೆ ಮುಂದಿನ ತಿಂಗಳಲ್ಲಿ ಪ್ರಶಸ್ತಿ ನೀಡಲು ನಿರ್ಧಾರವಾಗಿದೆ.