ಕೊಲ್ಕತ್ತಾ, ನ 24(DaijiworldNews/SM): ಮೊದಲ ಡೇ ನೈಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 46 ರನ್ ಗಳಿಂದ ಗೆಲ್ಲುವ ಮೂಲಕ ಸರಣಿ ಗೆದ್ದುಕೊಂಡಿದೆ. ಆ ಮೂಲಕ ಮೊದಲ ಡೇ ನೈಟ್ ಪಂದ್ಯದಲ್ಲೇ ಭಾರತ ಇತಿಹಾಸ ನಿರ್ಮಿಸಿದೆ.
ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದ ಮೂರನೇ ದಿನವಾದ ಭಾನುವಾರ ಉಮೇಶ್ ಯಾದವ್, ಬೌನ್ಸರ್ ಮೂಲಕ ಇಬಾದತ್ ಹುಸೇನ್ ಅವರನ್ನು ಫೆವೀಲಿಯನ್ ಗೆ ಅಟ್ಟಿದರು. ಆದರೆ, ಅರ್ಧಶತಕ ದಾಖಲಿಸಿ ಕ್ರೀಸ್ ಗೆ ಭದ್ರವಾಗಿದ್ದ ಬಾಂಗ್ಲಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮುಷ್ಪಿಕರ್ ರಹೀಮ್ ಭಾರತದ ಬೌಲರ್ ಗಳನ್ನು ಕಾಡಿದರು. ಅಂತಿಮವಾಗಿ 74 ರನ್ ಗಳಿಸಿದ್ದ ಸಂದರ್ಭ ಅವರನ್ನು ಪೆವಿಲಿಯನ್ ಗೆ ಅಟ್ಟುವಲ್ಲಿ ಭಾರತೀಯ ಬೌಲರ್ ಗಳು ಸಫಲರಾದರು.
ಅನುಭವಿ ಬ್ಯಾಟ್ಸ್ ಮನ್ ಮೊಹ್ಮದುಲ್ಲಾ 39 ರನ್ ಗಳಿಸಿದ್ದ ಸಂದರ್ಭದಲ್ಲಿ ಗಾಯಗೊಂಡು ಪಂದ್ಯದಿಂದ ಹೊರನಡೆದರು. ಅಂತಿಮವಾಗಿ ಅಲ್ ಅಮಿನ್ ಹುಸೇನ್(21) ಗಳಿಸಿ ಔಟಾದಾಗ ಭಾರತ ತಂಡ ಗೆಲುವಿನ ನಗೆ ಚೆಲ್ಲಿತು.
ಇನ್ನು ಪಂದ್ಯದ ಎರಡನೇ ದಿನ 9 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿಕೊಂಡಿದ್ದ ಭಾರತ ತಂಡ 241 ರನ್ ಗಳ ಮುನ್ನಡೆ ಸಾಧಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 106 ರನ್ ಗಳಿಗೆ ಬಾಂಗ್ಲಾದೇಶ ಆಲ್ ಔಟ್ ಆಗಿತ್ತು. ಸರಣಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಇಶಾಂತ್ ಶರ್ಮಾ ಭಾರತ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ ಐದು ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಹಾಗೂ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಈ ಗೆಲುವಿನ ಮೂಲಕ ಭಾರತ ತಂಡ ತವರಿನಲ್ಲಿ ಸತತ 12ನೇ ಟೆಸ್ಟ್ ಸರಣಿ ಗೆದ್ದುಕೊಂಡಿದೆ. ಹಾಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಸತತ 7ನೇ ಸರಣಿ ಜಯವಾಗಿದೆ.