ಕೊಲ್ಕೊತ್ತಾ, ನ 19 (Daijiworld News/MSP): ಭಾರತ ತಂಡ ತನ್ನ ೫೪೦ನೇ ಟೆಸ್ಟ್ ಪಂದ್ಯದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಲಿದೆ. ಶುಕ್ರವಾರದಿಂದ ಕೊಲ್ಕೊತ್ತಾದ ಈಡೆನ್ ಗಾರ್ಡೆನ್ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಪ್ರಾರಂಭವಾಗಲಿರುವ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯಾಟ ಇತ್ತಂಡಗಳಿಗೂ ಐತಿಹಾಸಿಕವಾದುದಾಗಿದೆ. ಏಕೆಂದರೆ ಇದು ಡೇ ನೈಟ್ ಪಿಂಕ್ ಬಾಲ್ ಟೆಸ್ಟ್ ಆಗಿದೆ.
ಈ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ಭಾರತೀಯ ಟೆಸ್ಟ್ ತಂಡದ ಆಟಗಾರರು ಕಠಿಣ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಮತ್ತು ಈ ವಾತಾವರಣದಲ್ಲಿ ಆಡಲು ತಮ್ಮನ್ನು ತಾವು ಮಾನಸಿಕವಾಗಿ ಸಿದ್ಧಗೊಳಿಸುತ್ತಿದ್ದಾರೆ. ಆಟದಲ್ಲಿ ಕೆಂಪು, ಬಿಳಿ, ಪಿಂಕ್ ಬಣ್ಣದ ಚೆಂಡು ವರ್ತಿಸುವ ಕ್ರಮದಲ್ಲಿ ಭಿನ್ನತೆ ಹೊಂದಿದೆ. ರಾತ್ರಿ ವೇಳೆ ಕೆಂಪು ಬಣ್ಣದ ಚೆಂಡಿಗಿಂತ ಪಿಂಕ್ ಬಾಲ್ ಹೆಚ್ಚು ಸ್ಪಷ್ಟತೆಯನ್ನು ಹೊಂದಿದೆ ಎಂದು ಆಟಕ್ಕೆ ಪಿಂಕ್ ಬಾಲ್ ಬಳಸುವ ತೀರ್ಮಾನಕ್ಕೆ ಬರಲಾಗಿದೆ. ಗುಲಾಬಿ ಬಾಲ್ ವರ್ತನೆ ಸ್ವಲ್ಪ ನಿಧಾನಗತಿಯದ್ದಾಗಿದೆ. ಟೀಂ ಇಂಡಿಯಾ ನಾಯಕ ಕೊಹ್ಲಿ ಕೂಡಾ ಪಿಂಕ್ ಬಾಲ್ ನೊಂದಿಗೆ ಸಂಧ್ಯಾಕಾಲದಲ್ಲಿ ಅಭ್ಯಾಸ ಮಾಡುವಂತೆ ಸೂಚಿಸಿದ್ದಾರೆ.
ಇದಕ್ಕೆ ಪೂರಕವಾಗಿ ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಪಿಂಕ್ ಬಾಲ್ ನ ಕುರಿತಾಗಿಯೇ ಕನವರಿಸುತ್ತಿರುವ ಪೋಟೋವನ್ನು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮಲಗಿರುವಂತೆ ನಟಿಸಿ ತನ್ನ ತಲೆದಿಂಬಿನ ಬದಿಯಲ್ಲಿ ಪಿಂಕ್ ಚೆಂಡೊಂದನ್ನು ಇರಿಸಿಕೊಂಡು, ‘ನಾನು ಪಿಂಕ್ ಬಾಲ್ ಟೆಸ್ಟ್ ಕನಸು ಕಾಣಲು ಆರಂಭಿಸಿದ್ದೇನೆ’ ಎಂದು ರಹಾನೆ ಬರೆದುಕೊಂಡಿದ್ದಾರೆ.