ಮುಂಬಯಿ, ಅ 27 (DaijiworldNews/SM): ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಟ ದಂತಕತೆ ಸಚಿನ್ ತೆಂಡುಲ್ಕರ್ ಅವರು ಆರಂಭದಲ್ಲಿ ಕ್ರಿಕೆಟ್ ನಿಂದ ತಿರಸ್ಕಾರಗೊಂಡಿದ್ದರು ಎಂದರೆ, ನಂಬಲು ಒಂದಿಷ್ಟು ಕಷ್ಟ ಸಾಧ್ಯ. ಆದರೆ, ನಂಬಲೇ ಬೇಕಾದ ವಿಚಾರವಾಗಿದ್ದು, ಸಚಿನ್ ಅವರೇ ಈ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಕ್ರಿಕೆಟ್ ವೃತ್ತಿ ಜೀವನದ ಮೊದಲ ಆಯ್ಕೆ ಪ್ರಕ್ರಿಯೆಯಲ್ಲೇ ತಾವು ತಿರಸ್ಕೃತಗೊಂಡಿದ್ದಾಗಿ ಸಚಿನ್ ಹೇಳಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಶಾಲಾ ಮಕ್ಕಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಶಾಲೆಯಲ್ಲಿ ಓದುತ್ತಿದ್ದ ಸಂದರ್ಭ ಭಾರತೀಯ ಕ್ರಿಕೆಟ್ ತಂಡದ ಕುರಿತಂತೆ ಅಪಾರ ಅಭಿಮಾನವನ್ನು ಹೊಂದಿದ್ದೆ. ಅಲ್ಲದೆ, ಶಾಲಾ ದಿನಗಳಲ್ಲೇ ಭಾರತ ತಂಡವನ್ನು ಸೇರಬೇಕೆನ್ನುವ ಆಸೆಯನ್ನು ಹೊಂದಿದ್ದೆ. 11ನೇ ವರ್ಷದಲ್ಲೇ ನನ್ನ ಕ್ರಿಕೆಟ್ ಪ್ರಯಾಣ ಆರಂಭವಾಗಿತ್ತು. ಆದರೆ, ಮೊದಲ ಬಾರಿ ಆಯ್ಕೆ ಪರೀಕ್ಷೆಗೆ ಹೋಗಿದ್ದಾಗ ಆಯ್ಕೆಗಾರರು ನನ್ನನ್ನು ತಿರಸ್ಕರಿದ್ದರು. ಇನ್ನಷ್ಟು ಶ್ರಮ ಹಾಕುವಂತೆ ಹೇಳಿ ವಾಪಸ್ ಕಳಿಸಿದ್ದರು, ಎಂದು ಮೊದಲ ಸೋಲಿನ ಬಗ್ಗೆ ಸ್ಮರಿಸಿಕೊಂಡರು.
ಮೊದಲನೇ ಸಲವೇ ತಿರಸ್ಕರಿಸಲ್ಪಟ್ಟಾಗ ಸಾಕಷ್ಟು ನಿರಾಸೆ ಉಂಟಾಗಿತ್ತು. ನಾನು ಉತ್ತಮ ಪ್ರದರ್ಶನ ನೀಡಿದ್ದೆ. ಹಾಗೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದೆ. ಆದರೆ, ಫಲಿತಾಂಶ ಬೇರೆಯೇ ಆಗಿತ್ತು. ಆದರೂ, ಪ್ರಯತ್ನವನ್ನು ಮುಂದುವರೆಸಿದೆ. ನನ್ನ ಗಮನ, ಕಠಿಣ ಪರಿಶ್ರಮದ ಫಲವಾಗಿ ನನ್ನ ಸಾಮಾರ್ಥ್ಯವನ್ನು ಪ್ರದರ್ಶಿಸಲು ಸಾಧ್ಯವಾಯಿತು. ನಿರಂತರ ಪ್ರಯತ್ನ ಕಠಿಣ ಅಭ್ಯಾಸದಿಂದ ನಮ್ಮ ಕನಸನ್ನು ಸಾರ್ಥಕಗೊಳಿಸಬಹುದೇ ಹೊರತು ಅಡ್ಡ ದಾರಿಗಳಿಂದ ಇದು ಅಸಾಧ್ಯ ಎಂದು ಸಚಿನ್ ತೆಂಡುಲ್ಕರ್ ತಿಳಿಸಿದ್ದಾರೆ.