ರಾಂಚಿ,ಅ 19 (DaijiworldNews/SM): ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಮೊದಲ ದಿನದಂತ್ಯಕ್ಕೆ 3 ವಿಕೆಟ್ ಗಳ ನಷ್ಟಕ್ಕೆ 224ರನ್ ಗಳ ಸಾಧಾರಣ ಮೊತ್ತ ಗಳಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಸಂಕಷ್ಟ ಎದುರಾಯಿತು. ಕನ್ನಡಿಗ, ಈ ಸರಣಿಯಲ್ಲಿ ದ್ವಿಶತಕ ಸರದಾರ ಮಾಯಾಂಕ್ ಅವರನ್ನು ಬೇಗನೇ ತಂಡ ಕಳೆದುಕೊಂಡಿತು. ಬಳಿಕ ಚೇತೇಶ್ವರ್ ಪೂಜಾರ ಹಾಗೂ ನಾಯಕ ಕೊಹ್ಲಿ ಕೂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಒಂದೆಡೆ ವಿಕೆಟ್ ಗಳು ಉರುಳುತ್ತಿದ್ದರೆ, ಮತ್ತೊಂದೆಡೆ ಪಂದ್ಯ ಆರಂಭಿಸಿದ್ದ ರೋಹಿತ್ ತಾಳ್ಮೆಯಿಂದಲೇ ಎಲ್ಲವನ್ನು ನೋಡುತ್ತಿದ್ದರು. ಹಾಗೂ ಜವಾಬ್ದಾರಿಯುತವಾಗಿ ಪ್ರದರ್ಶನ ನೀಡಲು ಮುಂದಾದರು. ತಂಡವನ್ನು ಸಂಕಷ್ಟದಿಂದ ಪಾರು ಮಾಡಿ ಸಾಧಾರಣ ಮೊತ್ತ ಪೇರಿಸುವಲ್ಲಿ ಯಶಸ್ವಿಯಾದರು.
ಅನಗತ್ಯ ಹೊಡೆತಗಳಿಗೆ ಕೈ ಹಾಕದ ಸ್ಪೋಟಕ ಬ್ಯಾಟ್ಸ್ ಮನ್ ಶತಕ ಸಿಡಿಸಿ ಮಿಂಚಿದರು. ಇವರಿಗೆ ನೆರವಾದವರು, ಉಪನಾಯಕ ರಹಾನೆ. ಈ ಜೋಡಿ ತಂಡವನ್ನು ಆಪಾಯದಿಂದ ಪಾರು ಮಾಡಿತು. ತಂಡ ಸಾಧಾರಣ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ದಿನದಾಟದ ಅಂತ್ಯಕ್ಕೆರೋಹಿತ್ 117 ರನ್ ಗಳಿಸಿ ಹಾಗೂ ರಹಾನೆ 83 ರನ್ ಗಳನ್ನು ಗಳಿಸಿ ಎರಡನೇ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ.