ನವದೆಹಲಿ, ಅ 16 (DaijiworldNews/SM): ಪ್ರೋ ಕಬಡ್ಡಿಯ ಸೆಮಿಫೈನಲ್ ಪಂದ್ಯಗಳು ಇಂದು ಮುಕ್ತಾಯಗೊಂಡಿದ್ದು, ದಬಂಗ್ ದೆಹಲಿ ಹಾಗೂ ಬೆಂಗಾಲ್ ವಾರಿಯರ್ಸ್ ಫೈನಲ್ ಗೆ ಎಂಟ್ರಿಕೊಟ್ಟಿದೆ.
ಬುಧವಾರದಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಂಗ್ ದೆಹಲಿ ಮುಖಾಮುಖಿಯಾಗಿತ್ತು. ಇಡೀ ಕೂಟದಲ್ಲಿ ಬಲಿಷ್ಟ ಎನಿಸಿಕೊಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ದಬಂಗ್ ದೆಹಲಿ ಮತ್ತೆ ಬಲಿಷ್ಟತೆ ಪ್ರದರ್ಶಿಸಿತು. ಬೆಂಗಳೂರು ತಂಡವನ್ನು ಮಣಿಸಿ ಪೈನಲ್ ಗೆ ಲಗ್ಗೆ ಇಟ್ಟಿತು. ದಬಂಗ್ ದೆಹಲಿ 44 ಅಂಕಗಳಿಸಿದರೆ, ಬೆಂಗಳೂರು ತಂಡ 38 ಅಂಕಗಳನ್ನಷ್ಟೇ ಪೇರಿಸಿ ಸೋಲೊಪ್ಪಿಕೊಂಡಿತು. ದೆಹಲಿ ಪರ ನವೀನ್ ಅತ್ಯಧಿಕ 15 ಅಂಕಗಳನ್ನು ತಂಡಕ್ಕೆ ಕೊಡುಗೆಯಾಗಿ ನೀಡಿದರೆ, ಚಂದ್ರನ್ 9 ಅಂಕಗಳನ್ನು ತಂಡಕ್ಕೆ ಸೇರಿಸಿದರು.
ಇನ್ನು ಬೆಂಗಳೂರು ಪರ ಪವನ್ ಅತ್ಯಧಿಕ 18 ಅಂಕಗಳನ್ನು ತಂಡಕ್ಕೆ ಕಾಣಿಕೆ ನೀಡಿದರು. ಸುಮಿತ್ 6 ಹಾಗೂ ರೋಹಿತ್ 5 ಅಂಕಗಳನ್ನು ತಂಡದ ಮೊತ್ತಕ್ಕೆ ಸೇರಿಸಿದರು. ಅಂತಿಮವಾಗಿ ಬೆಂಗಳೂರು ತಂಡ 4 ಅಂಕಗಳಿಂದ ಫೈನಲ್ ಗೆ ಲಗ್ಗೆ ಇಡುವ ಕನಸನ್ನು ಕಳೆದುಕೊಂಡಿತು.
ಇನ್ನು ಎರಡನೇ ಸೆಮೀಫೈನಲ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡ ಯು ಮುಂಬಾ ತಂಡದ ವಿರುದ್ಧ ರೋಚಕ ಗೆಲುವನ್ನು ದಾಖಲಿಸಿದೆ. ಪಂದ್ಯದ ಕೊನೆಯ ತನಕವು ಸಾಕಷ್ಟು ಕುತೂಹಲ ಕೆರಳಿಸಿತ್ತು. ಅಂತಿಮ ಐದು ನಿಮಿಷದ ಆಟದ ಸಂದರ್ಭದಲ್ಲಿ ಸಮಬಲದ ಹೋರಾಟ ನಡೆಯುತ್ತಿತ್ತು. ಕೈಗೆ ಬಂದ ಪಂದ್ಯವನ್ನು ಅಂತಿಮವಾಗಿ ಯು ಮುಂಬಾ ತಂಡ ಕೈಚೆಲ್ಲಿಕೊಂಡಿದೆ. ಕೇವಲ ಎರಡು ಅಂಕಗಳ ಅಂತರದಿಂದ ಬೆಂಗಾಲ್ ತಂಡ ಸೆಮಿಸ್ ಗೆದ್ದು, ಫೈನಲ್ ಗೆ ಲಗ್ಗೆ ಇಟ್ಟಿದೆ.
ಬೆಂಗಾಲ್ ಪರ ಸುಕೇಶ್ ಉತ್ತಮ ಪ್ರದರ್ಶನ ನೀಡಿದ್ದು, 8 ಅಂಕಗಳ ಕೊಡುಗೆಯನ್ನು ತಂಡಕ್ಕೆ ನೀಡಿದ್ದಾರೆ. ಇನ್ನು ಯು ಮುಂಬಾ ಪರ ಅಭಿಷೇಕ್ ಉತ್ತಮ ಪ್ರದರ್ಶನ ನೀಡಿದ್ದು 11 ಅಂಕಗಳನ್ನು ತಂಡದ ಖಾತೆಗೆ ಸೇರಿಸಿದ್ದಾರೆ. ಆದರೆ, ಅಂತಿಮವಾಗಿ ಯು ಮುಂಬಾ ತಂಡ ಸೆಮಿಫೈನಲ್ ನಲ್ಲಿ ಸೋಲೊಪ್ಪಿಕೊಂಡು ಈ ಸಲದ ಕೂಟದಿಂದ ಹೊರ ನಡೆದಿದೆ.
ಇನ್ನು ದಬಂಗ್ ದೆಹಲಿ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳ ನಡುವೆ ಫೈನಲ್ ಪಂದ್ಯ ಅಕ್ಟೋಬರ್ 19ರ ಶನಿವಾರದಂದು ನಡೆಯಲಿದೆ.