ನವದೆಹಲಿ, ಸೆ 30 (Daijiworld News/MSP): ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಕ್ರಿಕೆಟರ್ ಶ್ರೀಶಾಂತ್ ಮೇಲೆ ಹೇರಲಾಗಿದ್ದ ಜೀವಮಾನ ನಿಷೇಧವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಬಳಿಕ ಕ್ರಿಕೆಟ್ ಆಡುವ ಹುಮ್ಮಸ್ಸಿನಲ್ಲಿರುವ ವೇಗಿ ಶ್ರೀಶಾಂತ್ , ಸಂದರ್ಶವೊಂದರಲ್ಲಿ ತಾನು ಹಳದಿ ಬಣ್ಣ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ದ್ವೇಷಿಸುತ್ತೇನೆ ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಫ್ರ್ಯಾಂಚೈಸ್ ಚೆನ್ನೈ ಸೂಪರ್ ಕಿಂಗ್ಸ್ ಬಗ್ಗೆ ತಮ್ಮ ದ್ವೇಷದ ಬಗ್ಗೆ ಮಾತನಾಡಿದ ಅವರು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ ಪಂದ್ಯಗಳಲ್ಲಿ ಆಡಲು ಅನುಮತಿಸದಿದ್ದಾಗ ಬೌಲರ್ ತನ್ನನ್ನು ನಿಂದಿಸಿದ್ದಾನೆ ಎಂದು ಅಪ್ಟನ್ ತನ್ನ ಇತ್ತೀಚೆಗೆ ಪ್ರಕಟಿಸಿದ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ. ಆದರೆ " ಮಿಸ್ಟರ್ ಅಪ್ಟನ್, ನಿಮ್ಮ ಹೃದಯವನ್ನು ಸ್ಪರ್ಶಿಸಿ, ಹಾಗೂ ನಿಮ್ಮ ಮಕ್ಕಳ ಮೇಲೆ ಆಣೆ ಮಾಡಿ ಹೇಳಿ, ನಾನು ನಿಮಗೆ ಎಂದಾದರೂ ನಿಂದಿಸಿದ್ದೇನೆಯೇ ?, ಸಿಎಸ್ ಕೆ ವಿರುದ್ದ ನನ್ನ ರೆಕಾರ್ಡ್ ಚೆನ್ನಾಗಿದೆ. ನನಗೆ ಆ ತಂಡವನ್ನು ಸೋಲಿಸುವ ಆಸೆಯಿತ್ತು ಹಾಗಾಗಿ ನನಗೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಆಡಲು ಅವಕಾಶ ನೀಡುವಂತೆ ನಾನು ರಾಜಸ್ತಾನ ರಾಯಲ್ಸ್ ಕೋಚ್ ಅಪ್ಟನ್ ಬಳಿ ಕೇಳಿದ್ದೆ. ಆದರೆ ಅವರು ನಾನು ಫಿಕ್ಸಿಂಗ್ ಗಾಗಿ ಆಡಲು ಬಯಸುತ್ತೇನೆ ಎಂದು ಅಪಾರ್ಥ ಮಾಡಿಕೊಂಡರು.
ನಾನು ಸಿಎಸ್ಕೆ ಅನ್ನು ಎಷ್ಟು ದ್ವೇಷಿಸುತ್ತೇನೆ ಎಂದು ಎಲ್ಲರಿಗೂ ತಿಳಿದಿದೆ, ಅದರಲ್ಲಿ ಎಂ.ಎಸ್ ಧೋನಿ ಅಥವಾ ಶ್ರೀನಿವಾಸ್ ಇದ್ದಾರೆ ಎಂದಲ್ಲ. ಹಳದಿ ಬಣ್ಣವೆಂದರೆ ನನಗೆ ಇಷ್ಟವಿಲ್ಲ, ಇದೇ ಕಾರಣಕ್ಕೆ ನಾನು ಆಸ್ಟ್ರೇಲಿಯಾ ತಂಡವನ್ನು ಕೂಡಾ ದ್ವೇಷಿಸುತ್ತೇನೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
“ನಾನು ಇಬ್ಬರನ್ನು ನಿಂದಿಸಿದ್ದೇನೆ ಎಂಬ ಆರೋಪ ಅತ್ಯಂತ ನಿರಾಶಾದಾಯಕವಾಗಿತ್ತು. ಅದು ಪೊಲೀಸರ ಚಿತ್ರಹಿಂಸೆಗಿಂತ ದೊಡ್ಡದಾಗಿತ್ತು. ಆ ವಿಚಾರ ಅತ್ಯಂತ ನೋವುಂಟು ಮಾಡುತ್ತದೆ. ಇತರ ಆಟಗಾರರು ಅಪ್ಟನ್ ಬಗ್ಗೆ ಮಾತನಾಡುತ್ತಿದ್ದರು, “ಯೆ ಕೌನ್ ಹೈ ಬೇ, ಕರ್ಸ್ಟನ್ ಸಬ್ ಕುಚ್ ಕಾರ್ತಾ ಹೈ" ಎಂದು ಆದರೆ ಹೀಗೆ ಎಂದಾದರೂ ವರ್ತಿಸಿದ್ದೇನೆಯೇ? ನೀವು ತುಂಬಾ ಹತಾಶರಾಗಿರುವ ಕಾರಣ ನಿಮ್ಮ ಪುಸ್ತಕ ಹೆಚ್ಚು ಮಾರಾಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ ” ಶ್ರೀಶಾಂತ್ ಹೇಳಿದ್ದಾರೆ.