ನವದೆಹಲಿ, ಸೆ 20(DaijiworldNews/SM): ಟೀಂ ಇಂಡಿಯಾ ಕಂಡ ಮಹಾನ್ ನಾಯಕ ಹಾಗೂ ತಂಡಕ್ಕೆ ಪ್ರಮುಖ ಗೇಮ್ ಫಿನಿಷರ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ ಇದೀಗ ಕ್ರಿಕೆಟ್ ಪಂದ್ಯಗಳಿಂದ ದೂರ ಉಳಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ತಂಡದಲ್ಲಿ ಅವಕಾಶ ಸಿಗುವುದು ಅನುಮಾನವೇ ಸರಿ. ಇಂತಹ ಸನ್ನಿವೇಶಗಳಲ್ಲಿ ಆಟಗಾರನೊಬ್ಬ ಇದನ್ನು ತಿಳಿದುಕೊಂಡು ವಿದಾಯ ಹೇಳುವುದು ಉತ್ತಮ ಬೆಳವಣಿಗೆ. ಇದೀಗ ಧೋನಿಗೂ ಇದೇ ಪರಿಸ್ಥಿತಿ ಎದುರಾಗಿದೆ.
ಮಹೇಂದ್ರ ಸಿಂಗ್ ಧೋನಿಯವರು ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲು ಇದು ಸೂಕ್ತ ಸಮಯವೆಂದು ಹಿರಿಯ ಆಟಗಾರ ಸುನಿಲ್ ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೀನಾಯ ಪರಿಸ್ಥಿತಿ ಎದುರಾಗಬಹುದು. ಇದರ ಬದಲು ಈಗಲೇ ಅವರು ವಿದಾಯ ಹೇಳಲಿ ಎಂದು ಗಾವಸ್ಕರ್ ಸಲಹೆ ನೀಡಿದ್ದಾರೆ.
ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಲು ಇದು ಕ್ಲಪ್ತ ಸಮಯ. ಈಗಾಗಲೇ ವಿಶ್ವಕಪ್ ಬಳಿಕ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅರ್ಥಾತ್, ಅವರನ್ನು ತಂಡದಿಂದ ದೂರವಿಟ್ಟು, ಆ ಸ್ಥಾನಕ್ಕೆ ಹೊಸಬರನ್ನು ಪಕ್ಕಾ ಮಾಡಲಾಗುತ್ತಿದೆ. ಇನ್ನೊಂದೆಡೆ ವಯೋಮಾನ ಹೆಚ್ಚಾಗುತ್ತಿರುವುದರಿಂದ ಸಹಜವಾಗಿಯೇ ಪ್ರದರ್ಶನದಲ್ಲೂ ಕಳಪೆಯಾಗುತ್ತಿದ್ದಾರೆ. ಬಿಸಿಸಿಐ ಹಾಗೂ ತಂಡವೇ ಧೋನಿಯವರನ್ನು ತಂಡದಿಂದ ಕೈ ಬಿಡುವ ಮುನ್ನ ಅವರೇ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಲಿ ಎಂದು ಸುನಿಲ್ ಗಾವಸ್ಕರ್ ತಿಳಿಸಿದ್ದಾರೆ.