ನವದೆಹಲಿ, ಸೆ 10 (DaijiworldNews/SM): ಇತ್ತೀಚಿಗೆ ನಡೆದ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿರುವ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅವರ ಬದಲು ರೋಹಿತ್ ಶರ್ಮಾ ಅವರನ್ನು ತಂಡಕ್ಕೆ ಆಯ್ಕೆ ಮಾಡುವುದು ಸೂಕ್ತ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿಯ ಮುಖ್ಯ ಆಯ್ಕೆದಾರ ಎಂಎಸ್ಎಕೆ ಪ್ರಸಾದ್ ಸಲಹೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ ರಾಹುಲ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ವಿಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನ್ನಿಂಗ್ಸ್ಗಳಲ್ಲಿ 44, 38, 13 ಮತ್ತು ಆರು ರನ್ ಗಳಷ್ಟೇ ಗಳಿಸಲು ಶಕ್ತರಾಗಿದ್ದರು. ಶತಕ, ಅರ್ಧ ಶತಕ ಸಿಡಿಸಲಾಗದೆ ಪರದಾಡಿದ್ದರು. ಈ ಹಿನ್ನೆಲೆಯಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ರೋಹಿತ್ ಅವರನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕರಾಗಿ ಕಣಕ್ಕಿಳಿಸುವಂತೆ ಅವರು ಸಲಹೆ ನೀಡಿದ್ದಾರೆ.