ಜಮೈಕಾ, ಸೆ 03 (DaijiworldNews/SM): ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ೨-೦ ಅಂತರದಿಂದ ಗೆದ್ದುಕೊಂಡಿದೆ.
ಸಬೀನಾ ಪಾರ್ಕ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಶರಣಾಯಿತು. ಟೀಂ ಇಂಡಿಯಾ 257 ರನ್ ಗಳ ಭಾರೀ ಅಂತರದ ಗೆಲುವನ್ನು ತನ್ನದಾಗಿಸಿಕೊಂಡಿತು.
ವಿಂಡೀಸ್ ತಂಡಕ್ಕೆ ಗೆಲ್ಲಲು ಟೀಮ್ ಇಂಡಿಯಾ 468 ರನ್ಗಳ ಬೃಹತ್ ಗುರಿ ನಿಗಧಿಪಡಿಸಿತ್ತು. ಈ ಗುರಿ ಬೆನ್ನತ್ತಲು ಮುಂದಾದ ವೆಸ್ಟ್ ಇಂಡೀಸ್ ತಂಡ ರನ್ ಕದಿಯಲು ಪರದಾಡಿತು. 210 ರನ್ ಗಳಿಸಲಷ್ಟೇ ಶಕ್ತವಾಯಿತು.
ವಿಂಡಿಸ್ ಪರ ಶಮರ್ ಬ್ರೂಕ್ಸ್ 50 ರನ್ ಗಳಿಸಿದರೆ, ಜರ್ಮೈನ್ ಬ್ಲ್ಯಾಕ್ವುಡ್ 38 ರನ್ ಕಲೆ ಹಾಕಿದರು. ಜೊಸನ್ ಹೊಲ್ಡರ್ 39 ರನ್ ಪೇರಿಸಿದರು. ಟೀಂ ಇಂಡಿಯಾ ಪರ ಇಶಾಂತ್ ಶರ್ಮಾ 2, ಜಸ್ಪ್ರೀತ್ ಬೂಮ್ರಾ 1, ಮೊಹಮ್ಮದ್ ಶಮಿ 3 , ರವೀಂದ್ರ ಜಡೇಜಾ 3 ವಿಕೆಟ್ ಪಡೆದು ಸಂಭ್ರಮಿಸಿದರು.
ಇದಕ್ಕೂ ಮುನ್ನ ವಿಂಡೀಸ್ಗೆ ಫಾಲೋಆನ್ ಹೇರದೆ 299 ರನ್ಗಳ ಬೃಹತ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ ಭಾರತ, ಉಪನಾಯಕ ಅಜಿಂಕ್ಯ ರಹಾನೆ 64 ಹಾಗೂ ಹನುಮ ವಿಹಾರಿ 53 ಅಜೇಯ ಅರ್ಧಶತಕಗಳ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 168 ರನ್ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ವಿಂಡೀಸ್ಗೆ 468 ರನ್ಗಳ ಬೃಹತ್ ಗೆಲುವಿನ ಗುರಿಯನ್ನು ಒಡ್ಡಿತು.
ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಹನುಮ ವಿಹಾರಿ ಅವರ 111 ರನ್ ಗಳು ಹಾಗೂ ನಾಯಕ ವಿರಾಟ್ ಕೊಹ್ಲಿ 76, ಇಶಾಂತ್ ಶರ್ಮಾ 57 ಹಾಗೂ ಮಾಯಾಂಕ್ ಅಗರ್ವಾಲ್ ಅವರ 55 ರನ್ ಗಳ ನೆರವಿನಿಂದ 416 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಬಳಿಕ ಹ್ಯಾಟ್ರಿಕ್ ಸೇರಿದಂತೆ ಮೊದಲ ಇನ್ನಿಂಗ್ಸ್ ನಲ್ಲಿ ಆರು ವಿಕೆಟ್ ಸಾಧನೆ ಮಾಡಿದ ಜಸ್ಪ್ರೀತ್ ಬೂಮ್ರಾ ದಾಳಿಗೆ ಸಿಲುಕಿದ ವಿಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 117ರನ್ ಗಳಿಗೆ ಸರ್ವಪತನಗೊಂಡಿತ್ತು.
ಎರಡನೇ ಹಾಗೂ ಕೊನೆಯ ಪಂದ್ಯದಲ್ಲೂ ಭಾರತ ತಂಡ ಗೆಲುವು ಸಾಧಿಸಿದ್ದು, ಈ ಜಯದ ಮೂಲಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತಕ್ಕೆ ಅತಿಹೆಚ್ಚು ಗೆಲುವು ತಂದುಕೊಟ್ಟ ನಾಯಕ ಎಂಬ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.