ವೆಸ್ಟ್ ಇಂಡೀಸ್, ಆ 13 (DaijiworldNews/SM): ಮೂವನೇ ಏಕದಿನ ಪಂದ್ಯವನ್ನು 6 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಟೀಂ ಇಂಡಿಯಾ ತಂಡ ವಿಂಡೀಸ್ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ ತಂಡ ಬೃಹತ್ ರನ್ ಪೇರಿಸುವ ನಿರೀಕ್ಷೆ ಹೊಂದಿತ್ತು. ಆರಂಭಿಕ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಅಬ್ಬರಿಸಿದರು. ಕೇವಲ 41 ಎಸೆತಗಳನ್ನು ಎದುರಿಸಿದ ಗೇಲ್ ಭರ್ಜರಿ 5 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 72 ರನ್ ಗಳನ್ನು ಸಿಡಿಸಿ ಮಿಂಚಿದರು. ಇನ್ನು ಇವರಿಗೆ ಸಾತ್ ನೀಡಿದ ಇವಿನ್ ಲೂಯಿಸ್ 42 ರನ್ ಗಳ ಕೊಡುಗೆ ನೀಡಿದರು. ಬಳಿಕ ಮಧ್ಯಮ ಕ್ರಮಾಂಕದ ಆಟಗಾರರು ಸಾಧಾರಣ ಮೊತ್ತ ಕಲೆ ಹಾಕಿದರು. ಆದರೆ ಈ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ್ದ.
ಈ ಹಿನ್ನೆಲೆಯಲ್ಲಿ ಪಂದ್ಯವನ್ನು 35 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಅಂತಿಮವಾಗಿ ಏಳು ವಿಕೆಟ್ ಗಳ ನಷ್ಟಕ್ಕೆ ವಿಂಡೀಸ್ ತಂಡ 240 ರನ್ ಗಳನ್ನು ಸಿಡಿಸಿತು. ಹಾಗೂ ಭಾರತಕ್ಕೆ ಗೆಲ್ಲಲು 241 ರನ್ ಗಳ ಗುರಿ ನೀಡಿತು.
ವಿಂಡೀಸ್ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಟೀಂ ಇಂಡಿಯಾದ ಆರಂಭಿಕ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ರೋಹಿತ್ 10 ರನ್ ಗಳಿಸಿ ನಿರ್ಗಮಿಸಿದರೆ, ಶಿಖರ್ ಧವನ್ 36 ರನ್ ಭಾರಿಸಿದರು. ಬಳಿಕ ತಂಡಕ್ಕೆ ನೆರವಾಗಿದ್ದು ಕ್ಯಾಪ್ಟರ್ ಕೊಹ್ಲಿ. ವಿರಾಟ ರೂಪ ತಾಳಿದ ಕೊಹ್ಲಿ 99 ಎಸೆತಗಳಲ್ಲಿ 114 ರನ್ ಗಳನ್ನು ಪೇರಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಹಾಗೂ ಅಜೇಯರಾಗಿ ಉಳಿದರು.
ಇನ್ನು ನಾಯಕನಿಗೆ ನೆರವಾದ ಶ್ರೇಯಸ್ ಅಯ್ಯರ್ ಅರ್ಧ ಶತಕ ಸಿಡಿಸಿದರು. 65 ರನ್ ಗಳ ಕಾಣಿಕೆಯನ್ನು ನೀಡಿ ತಂಡವನ್ನು ಗೆಲುವಿನ ದಡದತ್ತ ಕೊಂಡೊಯ್ಯಲು ನೆರವಾದರು.
ಅಂತಿಮವಾಗಿ ಭಾರತ 32.3 ಓವರ್ ಗಳಲ್ಲಿ ನಾಲ್ಕು ವಿಕೆಟ್ ಗಳ ನಷ್ಟಕ್ಕೆ 256 ರನ್ ಗಳನ್ನು ಪೇರಿಸುವ ಮೂಲಕ ಗೆಲುವಿನ ದಡ ಸೇರಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಎರಡು ಸೊನ್ನೆ ಅಂತರದಿಂದ ಟೀಂ ಇಂಡಿಯಾ ಗೆದ್ದುಕೊಂಡಿದೆ.
ಮೊದಲ ಪಂದ್ಯ ಮಳೆಯಿಂದಾಗಿ ರದ್ದುಗೊಂಡರೆ, ಬಳಿಕದ ಎರಡೂ ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು.