ಲಂಡನ್, ಆ 13 (DaijiworldNews/SM): 2022 ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳಾ ಟಿ-20 ಕ್ರಿಕೆಟ್ ಸೇರ್ಪಡೆಗೊಳ್ಳುವ ಮೂಲಕ ಐತಿಹಾಸಿಕ ನಿರ್ಧಾರ ಪ್ರಕಟಿಸಲಾಗಿದೆ. ಆ ಮೂಲಕ ಮಹಿಳಾ ಕ್ರಿಕೆಟ್ ತಂಡಕ್ಕೆ ಹೊಸ ಅವಕಾಶವೊಂದು ತೆರೆದುಕೊಂಡಿದೆ.
2022 ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳಾ ಟಿ-20 ಕ್ರಿಕೆಟ್ ಸೇರ್ಪಡೆಯಾಗಿರುವುದನ್ನು ಐಸಿಸಿ ಹಾಗೂ ಕಾಮನ್ವೆಲ್ತ್ ಒಕ್ಕೂಟ ಖಚಿತಪಡಿಸಿದೆ. ಮೊದಲ 8 ಸ್ಥಾನಗಳಲ್ಲಿರುವ ತಂಡಗಳು 2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸ್ಪರ್ಧಿಸಲಿವೆ.
ಎಲ್ಲಾ ಪಂದ್ಯಗಳು ಇಂಗ್ಲೆಂಡ್ನ ಎಡ್ಬಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಐಸಿಸಿ ತಿಳಿಸಿದೆ. ಇನ್ನು ಭಾರತ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ತಂಡಗಳು ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಕಾಣಿಸಿಕೊಳ್ಳಲಿವೆ.
1998ರಲ್ಲಿ ಕೌಲಲಾಂಪುರದಲ್ಲಿ ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮೊದಲ ಬಾರಿ ಕ್ರಿಕೆಟ್ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಚಿನ್ನ ಗೆದ್ದಿತ್ತು.