ಫ್ಲೋರಿಡಾ, ಆ 04 (DaijiworldNews/SM): ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ದಾಖಲೆ ಮುಂದುವರೆದಿದೆ. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಫ್ಲೋರಿಡಾದ ಲಾಡೇರ್ ಹಿಲ್ ನ ಸೆಂಟ್ರಲ್ ಬ್ರೋವರ್ಡ್ ರೀಜಿನಲ್ ಪಾರ್ಕ್ ಕ್ರೀಡಾಂಗಣ ಟರ್ಫ್ ಮೈದಾನದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಕೇವಲ 51 ಎಸೆತಗಳಲ್ಲಿ ರೋಹಿತ್ 67 ರನ್ ಗಳಿಸಿದ್ದಾರೆ. ಅವರ ಈ ಇನ್ನಿಂಗ್ಸ್ ನಲ್ಲಿ 3 ಭರ್ಜರಿ ಸಿಕ್ಸರ್ ಮತ್ತು 6 ಬೌಂಡರಿ ಸಿಡಿಸಿದ್ದರು. ಇದೀಗ ಇದೇ ಸಿಕ್ಸರ್ ಗಳ ಮೂಲಕ ರೋಹಿತ್ ಶರ್ಮಾ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಸಿಡಿಸಿದ ಸಿಕ್ಸರ್ ಮೂಲಕ ರೋಹಿತ್ ಶರ್ಮಾ ಟಿ-20 ಕ್ರಿಕೆಟ್ ನಲ್ಲಿ 106 ಸಿಕ್ಸರ್ ಗಳನ್ನು ಸಿಡಿಸಿ ಈ ದಾಖಲೆ ಬರೆದಿದ್ದಾರೆ. ವಿಶೇಷವೆಂದರೆ, ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅದೇ ತಂಡದ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ. ಗೇಲ್ ಅವರು ಇಲ್ಲಿಯ ತನಕ 105 ಸಿಕ್ಸರ್ ಸಿಡಿಸಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನು ಹೊಂದಿದ್ದರು.