ನವದೆಹಲಿ, ಜು 27 (Daijiworld News/MSP): ಭಾರತದ ಸ್ಟಾರ್ ಕ್ರಿಕೆಟರ್ ಮೊಹಮ್ಮದ್ ಶಮಿ ಅವರಿಗೆ ಅಮೇರಿಕಾ ವೀಸಾ ನಿರಾಕರಿಸಿದ ಹಿನ್ನಲೆಯಲ್ಲಿ ಬಿಸಿಸಿಐ, ಶಮಿ ನೆರವಿಗೆ ನಿಂತು ಯಶ ಸಾಧಿಸಿದೆ. ಶಮಿ ಮೇಲೆ ಕೌಟುಂಬಿಕ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯದ ದೂರು ಪೊಲೀಸ್ ದಾಖಲೆಯಲ್ಲಿ ಇರುವುದರಿಂದ ಶಮಿ ಅವರಿಗೆ ಅಮೇರಿಕಾ ವೀಸಾ ನೀಡಲು ನಿರಾಕರಿಸಿತ್ತು.
ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಅವರು ಅಮೇರಿಕಾ ರಾಯಭಾರಿ ಕಚೇರಿಗೆ ಪತ್ರ ಬರೆದು, ಶಮಿ ಒಬ್ಬ ಕ್ರೀಡಾತಾರೆ. ಇವರು ದೇಶಕ್ಕೆ ನೀಡಿದ ಸಾಧನೆಗಳನ್ನು ಪರಿಗಣಿಸಿ, ಪತ್ನಿ ಹಸೀನ್ ಜಾಹನ್ ನೀಡಿರುವ ವೈವಾಹಿಕ ಕಲಹಕ್ಕೆ ಸಂಬಂಧಿಸಿದ ಕೇಸು ಅದು ಅವರ ವೈಯಕ್ತಿಕ ವಿಚಾರವಾಗಿದೆ. ಹೀಗಾಗಿ ಈ ವಿಚಾರವನ್ನು ಬದಿಗಿರಿಸುವಂತೆ ವಿನಂತಿಸಿಕೊಂಡಿರುವುದರಿಂದ ಬೆಂಗಾಲ್ ವೇಗದ ಬೌಲರ್ ಶಮಿಗೆ ಕ್ಲೀಯರೆನ್ಸ್ ದೊರೆತಿದೆ.
2018ರ ಆರಂಭದಲ್ಲಿ ಶಮಿ ಪತ್ನಿ ಜಾಹನ್, ಶಮಿ ಅವರ ವಿರುದ್ದ ಕೌಟುಂಬಿಕ ಕಲಹದ ಆರೋಪವನ್ನು ಹೊರಿಸಿದ್ದರು. ಆ ನಂತರ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇಬ್ಬರ ಮಧ್ಯೆ ದಾಂಪತ್ಯ ಜೀವನದ ಕಲಹ ಪ್ರಾರಂಭವಾದ ನಂತರ ಜಾಹನ್, ಶಮಿ ವಿರುದ್ದ ಕೋಲ್ಕತ್ತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಶಮಿ ಅಮೇರಿಕಾದ ನಂತ್ರ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯುವ ಮೂರು ಏಕದಿನ ಪಂದ್ಯ ಹಾಗೂ ಎರಡು ಟಿ-20 ಪಂದ್ಯಗಳಲ್ಲಿ ಶಮಿ ಪಾಲ್ಗೊಳ್ಳಲಿದ್ದಾರೆ.