ಲಂಡನ್, ಜು15(Daijiworld News/SS): ವಿಶ್ವಕಪ್ ಟ್ರೋಫಿಯ ಅಧಿಕಾರದಿಂದ ದೂರವೇ ಉಳಿದಿದ್ದ ಇಂಗ್ಲೆಂಡ್ ತಂಡ, ಕೊನೆಗೂ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವಿಶ್ವ ಚಾಂಪಿಯನ್ ಪಟ್ಟವೇರಿದೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ 12ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಹಾಲಿ ರನ್ನರ್ಅಪ್ ನ್ಯೂಜಿಲೆಂಡ್ ತಂಡವನ್ನು ಸೂಪರ್ ಓವರ್ ಸಾಹಸದಲ್ಲಿ ಮಣಿಸಿದ ಆತಿಥೇಯ ತಂಡ ಏಕದಿನ ಮಾದರಿಯ ವಿಶ್ವ ಸಾಮ್ರಾಟನಾಗಿ ಹೊರಹೊಮ್ಮಿತು.
ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ರವಿವಾರ ನಡೆದ ವಿಶ್ವಕಪ್ ಕ್ರಿಕೆಟ್ ಕೂಟದ ಫೈನಲ್ ಹೋರಾಟದಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ಪ್ರಚಂಡ ಹೋರಾಟ ನಡೆಸಿದವು. ಫೈನಲ್ ಪಂದ್ಯ ರೋಚಕ ಟೈಯಲ್ಲಿ ಅಂತ್ಯಗೊಂಡರೆ ಆಬಳಿಕ ಫಲಿತಾಂಶ ನಿರ್ಧಾರಕ್ಕಾಗಿ ನಡೆದ ಸೂಪರ್ ಓವರ್ ಕೂಡ ರೋಚಕ ಟೈ ಆಯಿತು. ಅಂತಿಮವಾಗಿ ಗರಿಷ್ಠ ಬೌಂಡರಿ ಬಾರಿಸಿದ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ಚಾಂಪಿಯನ್ ಎಂದು ಘೋಷಿಸಲಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ನಿಗದಿತ ಓವರ್'ನಲ್ಲಿ 8 ವಿಕೆಟ್ ಕಳೆದುಕೊಂಡು 241 ರನ್ ಮಾತ್ರ ಪೇರಿಸಿತ್ತು. ಇನ್ನು 242 ರನ್'ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಸಹ ನಿಗದಿತ ಓವರ್ ಮುಕ್ತಾಯಕ್ಕೆ 241 ರನ್ ಪೇರಿಸಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಹೀಗಾಗಿ ಸೂಪರ್ ಓವರ್ ನೀಡಲಾಯಿತು. ಮೊದಲಿಗೆ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಓವರ್ ಮುಕ್ತಾಯಕ್ಕೆ 15 ರನ್ ಪೇರಿಸಿ ನ್ಯೂಜಿಲ್ಯಾಂಡ್ ಗೆ ಗೆಲ್ಲಲು 16 ರನ್ ಗುರಿ ನೀಡಿತು. ಆದರೆ ಈ ಮೊತ್ತ ಪೇರಿಸಲು ಸಾಧ್ಯವಾಗದೆ ನ್ಯೂಜಿಲ್ಯಾಂಡ್ ಸೋಲು ಕಂಡಿದೆ.
ನ್ಯೂಜಿಲ್ಯಾಂಡ್ ಪರ ಮಾರ್ಟಿನ್ ಗುಪ್ಟಿಲ್ 19, ನಿಕೋಲಾಸ್ 55, ಕೇನ್ ವಿಲಿಯಮ್ಸನ್ 30, ಲ್ಯಾಥಂ 47, ನಿಶಾಮ್ 19 ರನ್ ಬಾರಿಸಿದ್ದಾರೆ.
ಇಂಗ್ಲೆಂಡ್ ಪರ ಬೌಲಿಂಗ್ ನಲ್ಲಿ ಪ್ಲುಂಕೆಟ್ ಮತ್ತು ವೋಕ್ಸ್ ತಲಾ 3 ವಿಕೆಟ್ ಪಡೆದಿದ್ದಾರೆ. ಆರ್ಚರ್ ಮತ್ತು ಮಾರ್ಕ್ ವುಡ್ ತಲಾ 1 ವಿಕೆಟ್ ಪಡೆದಿದ್ದಾರೆ.