ವಿಶ್ವಕಪ್, ಜು 11 (DaijiworldNews/SM): ಕ್ರಿಕೆಟ್ ಕಾಶಿಯಲ್ಲಿ 2019ರ ವಿಶ್ವಕಪ್ ನ ಅಂತಿಮ ಹಣಾಹಣಿಯೊಂದೇ ಬಾಕಿ ಉಳಿದಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈ ವಿಶ್ವಕಪ್ ಪಂದ್ಯಗಳಲ್ಲಿ ಬಲಿಷ್ಟವೆನಿಸಿದ್ದ ಟೀಂ ಇಂದಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಅಂತಿಮ ನಾಲ್ಕರ ಘಟ್ಟದಲ್ಲಿ ಸೋತು ಹೊರ ನಡೆದಿವೆ. ಇದೀಗ ಫೈನಲ್ ಗೆ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ಎಂಟ್ರಿಯಾಗಿದ್ದು, ಎರಡೂ ತಂಡಗಳಿಗೆ ಇದು ಚೊಚ್ಚಲ ವಿಶ್ವಕಪ್ ಟ್ರೋಫಿಯಾಗಲಿದೆ.
ಈಗಾಗಲೇ ಜುಲೈ 14ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಅಲ್ಲಿ ಆಂಗ್ಲರು ಹಾಗೂ ಕಿವೀಸ್ ಪಡೆ ಮುಖಾಮುಖಿಯಾಗಲಿದ್ದಾರೆ. ಎರಡೂ ತಂಡಗಳಿಗೆ ಈ ವಿಶ್ವಕಪ್ ಮಹತ್ವದ್ದಾಗಿದೆ. ಗೆಲುವು ಚೊಚ್ಚಲ ಎನಿಸಿಕೊಳ್ಳಲಿದೆ. ಸೆಮೀಫೈನಲ್ ನಲ್ಲಿ ಎರಡೂ ತಂಡಗಳು ಬಲಿಷ್ಟ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾವನ್ನು ಮನಿಸಿ ಅಂತಿಮ ಘಟ್ಟಕ್ಕೆ ಬಂದು ತಲುಪಿವೆ. ಹೀಗಿರುವಾಗ ಯಾವ ತಂಡ ಗೆಲ್ಲಬಹುದೆಂಬ ಲೆಕ್ಕಾಚಾರ ಹಾಕುವುದು ಸ್ವಲ್ಪ ಕಷ್ಟದ ಸಂಗತಿಯಾಗಿದೆ.
ಆದರೆ, ಮೊದಲು ಬ್ಯಾಟಿಂಗ್ ಪಡೆದ ತಂಡ ವಿಶ್ವಕಪ್ ಎತ್ತಬಹುದೆಂಬುವುದು ತಜ್ಞರ ಅಭಿಪ್ರಾಯವಾಗಿದೆ. ಆದರೆ, ಅಂತಿಮ ಹಂತದಲ್ಲಿ ಯಾವುದೇ ಭವಿಷ್ಯಗಳು ಉಳಿಯುವುದಿಲ್ಲ. ಕೇವಲ ಅದೃಷ್ಟ ಹೊಂದಿದ ತಂಡಕ್ಕಷ್ಟೇ ಕಪ್ ಸಿಗಲಿದೆ. ಇನ್ನು ಕ್ರಿಕೆಟ್ ಜನಕ ಎಂದೇ ಕರೆಯಲ್ಪಡುವ ಇಂಗ್ಲೆಂಡ್ ಕಳೆದ ಹನ್ನೊಂದು ಬಾರಿಯೂ ವಿಶ್ವಕಪ್ ಎತ್ತೋದಕ್ಕೆ ಎಡವಿದೆ. ತಾನೇ ಜಗತ್ತಿಗೆ ಪರಿಚಯಿಸಿದ ಕ್ರೀಡೆಯೊಂದರಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ ಎನ್ನುವ ಬೇಸರವಂತು ಆ ತಂಡಕ್ಕಿದೆ. ಈ ಕಾರಣದಿಂದ ಈ ಬಾರಿ ದೊರೆತಿರುವ ಸುವರ್ಣಾವಕಾಶವನ್ನು ಕೈಚೆಲ್ಲಲಾರೆವು ಎಂಬುವುದು ಆಂಗ್ಲರ ಆಸೆಯಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ಈ ಬಾರಿ ನಡೆಯುತ್ತಿರುವ ವಿಶ್ವಕಪ್ ಪಂದ್ಯ ತನ್ನ ತವರಿನಲ್ಲೇ. ಇದು ಇಂಗ್ಲೆಂಡ್ ಗೆ ಒಂದಿಷ್ಟು ವರದಾನವಾಗಲಿದೆ. ತನ್ನ ತವರಿನ ಪಿಚ್ ಗಳ ಮೇಲೆ ಆಂಗ್ಲರು ಬಹುತೇಕ ಹಿಡಿತ ಹೊಂದಿರುವುದು ಸತ್ಯ. ಆದರೆ, ಅದು ಎಷ್ಟರ ಮಟ್ಟಿಗೆ ಕೂಡಿ ಬರುತ್ತದೆ ಎಂಬುವುದು ಮುಖ್ಯವಾಗಿದೆ.
ಇನ್ನು ಇತ್ತ ಬಲಿಷ್ಟ ಭಾರತ ತಂಡವನ್ನು ಮಣಿಸಿರುವ ಅಹಂ ಕಿವೀಸ್ ಪಡೆ ಹೊಂದಿದೆ. ಈ ಹಿನ್ನೆಲೆ ಪ್ರಶಸ್ತಿ ಗೆಲ್ಲ ಬಹುದೆಂಬ ಆತ್ಮ ವಿಶ್ವಾಸವನ್ನು ತಂಡ ಹೊಂದಿದೆ. ನಿರಂತರ ಅದ್ಭುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾವನ್ನು ಸೋಲಿಸಿದ ಬಳಿಕ ಆಂಗ್ಲರ ವಿರುದ್ಧದ ಪಂದ್ಯ ಗೆಲ್ಲುವುದು ಅಷ್ಟೇನು ತ್ರಾಸವಾಗದೂ ಎನ್ನುವುದು ಕಿವೀಸ್ ಪಡೆಯ ಯೋಚನೆಯಾಗಿದೆ. ಇನ್ನು ನ್ಯೂಜಿಲ್ಯಾಂಡ್ ತಂಡ ಕೂಡ ಪ್ರಶಸ್ತಿಯನ್ನು ಗೆಲ್ಲಲೇ ಬೇಕೆಂಬ ಹಟ್ಟಕ್ಕೆ ಬಿದ್ದಿದೆ. ಈ ಬಾರಿಯ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಬೇಕೆನ್ನುವುದು ಕಿವೀಸ್ ಆಶಯವಾಗಿದೆ.
ಇನ್ನು ೨೦೧೫ರ ವಿಶ್ವಕಪ್ ನಲ್ಲೂ ಕೂಡ ಬಲಿಷ್ಟ ಭಾರತ ತಂಡವನ್ನು ಮಣಿಸಿ ಕಿವಿಸ್ ಪಡೆ ಅಂತಿಮ ಘಟ್ಟಕ್ಕೆ ಎಂಟ್ರಿಕೊಟ್ಟಿತ್ತು. ಆದರೆ, ಫೈನಲ್ ನಲ್ಲಿ ಮಾತ್ರ ಆಸ್ಟ್ರೇಲಿಯಾ ವಿರುದ್ಧ ಮಂಡಿಯೂರಿತ್ತು. ಇದೀಗ ಮತ್ತೊಮ್ಮೆ, ಅದೇ ಸನ್ನಿವೇಶ ನ್ಯೂಜಿಲ್ಯಾಂಡ್ ತಂಡಕ್ಕೆ ಎದುರಾಗಿದೆ. ಆದರೆ, ಇಲ್ಲಿ ಫೈನಲ್ ಹಣಾಹಣಿಯಲ್ಲಿರುವ ತಂಡ ಮಾತ್ರ ಇಂಗ್ಲೆಂಡ್.
ಒಟ್ಟಿನಲ್ಲಿ 2019ರ ವಿಶ್ವಕಪ್ ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದೆ. ಯಾರು ಈ ಸಲ ವಿಶ್ವ ಗೆಲ್ಲುತ್ತಾರೆ? ಯಾರಾಗ್ತಾರೆ ಈ ಬಾರಿ ವಿಶ್ವಕಪ್ ಕಿಂಗ್? ಇದಕ್ಕೆಲ್ಲ ಜುಲೈ 14ರ ರವಿವಾರದಂದು ಉತ್ತರ ಸಿಗಲಿದೆ.