ಸುಳ್ಯ, ಫೆ.23(DaijiworldNews/TA) : ಗೆಳೆಯರ ಬಳಗ ಐವರ್ನಾಡು ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ದ.ಕ.ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಹಾಗೂ ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಸುಳ್ಯದ ಐವರ್ನಾಡಿನಲ್ಲಿ ನಡೆದ ಅಂತಾರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟದ ಲೀಗ್ ಪಂದ್ಯದಲ್ಲಿ ಬ್ಯಾಂಕ್ ಆಫ್ ಬರೋಡ, ಎಸ್ಡಿಎಂ ಉಜಿರೆ, ವಿದ್ಯಾಂಜನೇಯ ತಂಡಗಳು ಜಯಗಳಿಸಿದೆ.

ಬಲಿಷ್ಠ ಬ್ಯಾಂಕ್ ಆಫ್ ಬರೋಡ ತಂಡ ಬಿಸಿಆರ್ ಬೆಂಗಳೂರು ತಂಡವನ್ನು 36-27 ಅಂಕಗಳ ಅಂತರದಿಂದ ಮಣಿಸಿತು. ಪ್ರೊ ಕಬಡ್ಡಿ ಆಟಗಾರರನ್ನು ಒಳಗೊಂಡ ಬ್ಯಾಂಕ್ ಆಫ್ ಬರೋಡ ತಂಡದ ವಿರುದ್ಧ ಯುವ ಆಟಗಾರರನ್ನು ಒಳಗೊಂಡ ಬಿಸಿಆರ್ ಬೆಂಗಳೂರು ಜಿದ್ದಾ ಜಿದ್ದಿನ ಹೋರಾಟ ನಡೆಸಿತು.
ಇನ್ನೊಂದು ಪಂದ್ಯದಲ್ಲಿ ಎಸ್ಡಿಎಂ ಉಜಿರೆ ತಂಡವು ವಿದ್ಯಾಂಜನೇಯ ಉಳ್ಳಾಳ ತಂಡದ ವಿರುದ್ಧ 37-24 ಅಂಕಗಳ ಅಂತರದ ಜಯ ಸಾಧಿಸಿತು. ಆರಂಭದಿಂದಲೇ ಬಿರುಸಿನ ಆಟವಾಡಿದ ಎಸ್ಡಿಎಂ ಮುನ್ನಡೆ ಕಾಯ್ದುಕೊಂಡಿತು. ಮತ್ತೊಂದು ಲೀಗ್ ಪಂದ್ಯದಲ್ಲಿ ವಿದ್ಯಾಂಜನೇಯ ಉಳ್ಳಾಲ ತಂಡ ಎನ್ಎಫ್ಸಿ ಕಾಸರಗೋಡು ತಂಡವನ್ನು 38-31 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿತು. ಎರಡೂ ತಂಡಗಳ ಸಮಬಲದ ಹೋರಾಟ ಕಂಡ ಪಂದ್ಯದಲ್ಲಿ ವಿದ್ಯಾಂಜನೇಯ ಗೆಲುವಿನ ನಗೆ ಬೀರಿತು.