ನವದೆಹಲಿ, ಜೂ13(Daijiworld News/SS): ದೇಶದ ಹೆಮ್ಮೆಯ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಮುಂದಿಟ್ಟು ಪಾಕಿಸ್ತಾನ ಭಾರತವನ್ನು ವ್ಯಂಗ್ಯ ಮಾಡಿದಕ್ಕೆ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಗರಂ ಆಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಸಾನಿಯಾ, ಎರಡು ಕಡೆ ಅವಮಾನಕರ ವಿಷಯದೊಂದಿಗೆ ಜಾಹೀರಾತು ತಯಾರಾಗಿದೆ. ಸ್ವಲ್ಪ ಗಂಭೀರವಾಗಿ ನಡೆದುಕೊಳ್ಳಿ. ಈ ಪಂದ್ಯಕ್ಕೆ ಪ್ರಚಾರ ನೀಡುವ ಯಾವುದೇ ಅವಶ್ಯಕತೆ ಇಲ್ಲ. ಈಗಾಗಲೇ ಈ ಪಂದ್ಯಕ್ಕೆ ಪ್ರಚಾರ ಸಿಕ್ಕಿದೆ. ಇದು ಕೇವಲ ಕ್ರಿಕೆಟ್ ಪಂದ್ಯ ಎಂದು ಹೇಳಿದ್ದಾರೆ.
ಭಾರತ ವಾಯುಗಡಿಯನ್ನು ಉಲ್ಲಂಘಿಸಿದ ಪಾಕ್ ಯುದ್ಧ ವಿಮಾನಗಳನ್ನು ಬೆನ್ನಟ್ಟಿ ಹೋಗಿ ಪಾಕ್ನ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿ, ಆಕಸ್ಮಿಕವಾಗಿ ಪಾಕ್ ಗಡಿಯಲ್ಲಿ ಬಿದ್ದಿದ್ದ, ಭಾರತೀಯ ವಾಯುಪಡೆಯ ವೀರಯೋಧ ಅಭಿನಂದನ್ ಅವರನ್ನು ಸೆರೆಹಿಡಿದಿದ್ದ ಪಾಕ್ ಬಳಿಕ ಅವರನ್ನು ನಡೆಸಿಕೊಂಡ ರೀತಿಯನ್ನು ಕ್ರಿಕೆಟ್ಗೆ ತಳುಕು ಹಾಕಿ ಲೇವಡಿ ಮಾಡಿರುವುದು ಭಾರತೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಗೆಲುವು ದಾಖಲಿಸುವಂತೆ ತಂಡವನ್ನು ಹುರಿದುಂಬಿಸಲು, ಮೌಕಾ, ಮೌಕಾ.. ಎಂಬ ಜಾಹೀರಾತನ್ನು ಭಾರತ ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಪಾಕ್ ಕೂಡ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿ, ಭಾರತೀಯರನ್ನು ಅಣುಕಿಸಿರುವುದು ಕೋಪಕ್ಕೆ ಕಾರಣವಾಗಿದೆ.