ಕೊಲ್ಕತ್ತಾ, ಫೆ.18 (DaijiworldNews/AA): ಮಾರ್ಚ್ 22 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18 ಆರಂಭವಾಗಲಿದ್ದು, ಈಗಾಗಲೇ ಟೂರ್ನಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಾಲೆಳೆದಿದೆ.

ಈ ಬಾರಿಯ ಐಪಿಎಲ್ನ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣೆಸಾಡಲಿವೆ. ಮಾರ್ಚ್ 22 ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ಅದಕ್ಕೂ ಮುನ್ನ ಆರ್ಸಿಬಿಗೆ ಕೆಕೆಆರ್ ಹಳೆಯ ಸೋಲಿನ ಕಹಿ ನೆನಪನ್ನು ನೆನಪು ಮಾಡಿದೆ.
49 ರನ್ಗಳ ಆಲೌಟ್ ಅನ್ನು ಪ್ರಸ್ತಾಪಿಸುವ ಮೂಲಕ ಕೆಕೆಆರ್, ಆರ್ಸಿಬಿ ತಂಡದ ಕಾಲೆಳೆದಿದೆ. 2017 ರಲ್ಲಿ ಆರ್ಸಿಬಿ ತಂಡವು ಕೆಕೆಆರ್ ನೀಡಿದ 131 ರನ್ಗಳ ಗುರಿಯನ್ನ ಬೆನ್ನತ್ತಿ ಕೇವಲ 49 ರನ್ಗಳಿಗೆ ಆಲೌಟ್ ಆಗಿತ್ತು. ಈ ಪಂದ್ಯದಲ್ಲಿ ಆರ್ಸಿಬಿ ಪರ ಮೂಡಿಬಂದ ಗರಿಷ್ಠ ವೈಯುಕ್ತಿಕ ಸ್ಕೋರ್ 9 ರನ್ ಆಗಿತ್ತು.
ಕೇವಲ 49 ರನ್ಗೆ ಆಲೌಟ್ ಆಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತಕ್ಕೆ ಸೋಲನ್ನ ಕಂಡ ತಂಡವೆಂಬ ಕೆಟ್ಟ ದಾಖಲೆಯನ್ನ ಆರ್ಸಿಬಿ ಬರೆಯಿತು. ಇದನ್ನೇ ಕೆಕೆಆರ್ ಪ್ರಸ್ತಾಪಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಆರ್ಸಿಬಿಯ ಕಾಲೆಳೆದಿದೆ.