ದುಬೈ, ಡಿ. 14(DaijiworldNews/AK): ಐಸಿಸಿ 2025 ರ ಚಾಂಪಿಯನ್ಸ್ ಟ್ರೋಫಿಗಾಗಿ ಹೈಬ್ರಿಡ್ ಮಾದರಿಯನ್ನುಅನುಮೋದಿಸಿದೆ. ಪಿಸಿಬಿ ಮತ್ತು ಬಿಸಿಸಿಐ ನಡುವಿನ ಒಪ್ಪಂದದ ಬಳಿಕ ಪಾಕಿಸ್ತಾನ ಮತ್ತು ದುಬೈನಲ್ಲಿ ಪಂದ್ಯಗಳು ನಡೆಯಲಿದೆ.

ಈ ಒಪ್ಪಂದದ ಪ್ರಕಾರ 2026ರ ಟಿ20 ಟೂರ್ನಿಗೆ ಭಾರತಕ್ಕೆ ಪಾಕ್ ತಂಡ ಆಗಮಿಸುವುದಿಲ್ಲ. ಪಾಕಿಸ್ತಾನದ ಪಂದ್ಯಗಳು ಕೊಲಂಬೋದಲ್ಲಿ ನಡೆಯಲಿದೆ. ಒಪ್ಪಂದ ಅನ್ವಯ ಪಾಕಿಸ್ತಾನದ ಮೂರು ಸ್ಥಳಗಳಲ್ಲಿ ಪಂದ್ಯ ನಡೆದರೆ ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಭಾರತ ಒಂದು ವೇಳೆ ಸೆಮಿ ಫೈನಲ್, ಫೈನಲ್ ಪ್ರವೇಶಿಸಿದರೆ ಆ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಒಂದು ವೇಳೆ ಲೀಗ್ ಹಂತದಲ್ಲೇ ಭಾರತ ಟೂರ್ನಿಯಿಂದ ಹೊರಬಿದ್ದರೆ ಪಾಕಿಸ್ತಾನದ ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಸೆಮಿಫೈನಲ್, ಫೈನಲ್ ಪಂದ್ಯ ನಡೆಯಲಿದೆ.
ಭಾರತ ಹೈಬ್ರಿಡ್ ಮಾದರಿ ಆಡುವಂತೆ ಪ್ರಸ್ತಾಪ ಇಟ್ಟಿತ್ತು. ಆದರೆ ಪಾಕಿಸ್ತಾನ ಈ ಪ್ರಸ್ತಾಪವನ್ನು ತಿರಸ್ಕರಿಸಿತ್ತು. 2023ರಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ಗೆ ಭಾರತ ಪ್ರವಾಸವನ್ನು ನಾವು ಕೈಗೊಂಡಿದ್ದೇವೆ. ಹೀಗಾಗಿ ಭಾರತ ನಮ್ಮ ದೇಶಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದಿತ್ತು. ಅಷ್ಟೇ ಅಲ್ಲದೇ ಯಾವುದೇ ಕಾರಣಕ್ಕೂ ಹೈಬ್ರಿಡ್ ಪಂದ್ಯ ನಡೆಸಲು ಒಪ್ಪಿಗೆ ಸೂಚಿಸುವುದಿಲ್ಲ ಎಂದು ಪಟ್ಟು ಹಿಡಿದಿತ್ತು. ಕೊನೆಗೆ ಭಾರತದ ವಾದಕ್ಕೆ ಪಿಸಿಬಿ ಮಣಿದಿದ್ದು ಹೈಬ್ರಿಡ್ ಮಾದರಿ ಟೂರ್ನಿಗೆ ಒಪ್ಪಿಗೆ ಸೂಚಿಸಿದೆ.