ಮುಂಬೈ, ಡಿ.11(DaijiworldNews/AA): ಕಳೆದ ಕೆಲ ತಿಂಗಳಿಂದ ಸ್ಪೋರ್ಟ್ಸ್ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಭಾರತ ತಂಡದ ಯುವ ಬ್ಯಾಟರ್ ಸಾಯಿ ಸುದರ್ಶನ್ ಅವರು ಇದೀಗ ವಿದೇಶದಲ್ಲಿ ಸರ್ಜರಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಇದಕ್ಕಿಂತ ಮುನ್ನ ಸಾಯಿ ಸುದರ್ಶನ್ ಅವರು ಆಸ್ಟ್ರೇಲಿಯಾ ಎ ತಂಡದ ವಿರುದ್ಧದ ಸರಣಿಯಲ್ಲಿ ಭಾರತ ಎ ತಂಡವನ್ನು ಪ್ರತಿನಿಧಿಸಿದ್ದರು. ಜೊತೆಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡದ ವಿರುದ್ಧದ ಅಭ್ಯಾಸ ಪಂದ್ಯಗಳನ್ನಾಡಿದ್ದರು.
ಪರ್ತ್ ಟೆಸ್ಟ್ನಿಂದ ಹೊರಗುಳಿದಿದ್ದ ಶುಭ್ಮನ್ ಗಿಲ್ ಅವರ ಬದಲಿ ಆಟಗಾರನಾಗಿ ಸಾಯಿ ಸುದರ್ಶನ್ ಅವರನ್ನು ಆಯ್ಕೆಮಾಡಿರಲಿಲ್ಲ. ಇದಕ್ಕೆ ಕಾರಣ ಸಾಯಿ ಅವರಿಗಿದ್ದ ಸ್ಪೋರ್ಟ್ಸ್ ಹರ್ನಿಯಾ ಸಮಸ್ಯೆ ಎನ್ನಲಾಗಿದೆ.
ಈ ಹಿನ್ನೆಲೆ ಆಸ್ಟ್ರೇಲಿಯಾದಿಂದ ಹಿಂತಿರುಗಿದ ನಂತರ ಸಾಯಿ ಸುದರ್ಶನ್ ಸರ್ಜರಿಗೆ ಒಳಗಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಶೀಘ್ರದಲ್ಲೇ ಕಂಬ್ಯಾಕ್ ಮಾಡುತ್ತೇನೆ. ಎಲ್ಲಾ ರೀತಿಯ ಬೆಂಬಲಕ್ಕೆ ವೈದ್ಯಕೀಯ ತಂಡ ಹಾಗೂ ಬಿಸಿಸಿಐಗೆ ದೊಡ್ಡ ಧನ್ಯವಾದಗಳು. ಹಾಗೆಯೇ ಗುಜರಾತ್ ಟೈಟಾನ್ಸ್ ಫ್ಯಾಮಿಲಿಯ ಪ್ರೀತಿಗೆ ಮತ್ತು ಬೆಂಬಲಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ.