ದೆಹಲಿ, ನ.18(DaijiworldNews/AA): ಫ್ಲ್ಯಾಟ್ ಖರೀದಿದಾರರಿಗೆ ವಂಚನೆ ಪ್ರಕರಣದಲ್ಲಿ ಟೀಂ ಇಂಡಿಯಾ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ ಹಾಗೂ ಇತರರನ್ನು ಆರೋಪ ಮುಕ್ತಗೊಳಿಸಿದ್ದ ಆದೇಶವನ್ನು ರದ್ದು ಮಾಡಿದ್ದ ತೀರ್ಪಿಗೆ ದೆಹಲಿ ಹೈಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ.
ಪ್ರಕರಣದಲ್ಲಿ ತಮ್ಮನ್ನು ಆರೋಪಮುಕ್ತಗೊಳಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ನ ತೀರ್ಪನ್ನು ರದ್ದುಗೊಳಿಸಿ, ಹೊಸದಾಗಿ ತನಿಖೆ ನಡೆಸಬೇಕೆಂಬ ಸೆಷನ್ಸ್ ಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ಗಂಭೀರ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ಮಧ್ಯಂತರ ಆದೇಶ ನೀಡಿರುವ ನ್ಯಾಯಮೂರ್ತಿ ಮಜೋಜ್ ಕುಮಾರ್ ಒಮ್ಮೆ, ದೆಹಲಿ ಸರ್ಕಾರದ ಪ್ರತಿಕ್ರಿಯೆ ಕೇಳಿದ್ದಾರೆ.
ಅಕ್ಟೋಬರ್ 29ರ ಆದೇಶದಲ್ಲಿ, ಮ್ಯಾಜಿಸ್ಟ್ರೇಟ್ ಕೋರ್ಟ್ ನ ಆದೇಶವು ಗಂಭೀರ್ ವಿರುದ್ಧದ ಆರೋಪಗಳನ್ನು ನಿರ್ಧರಿಸುವಲ್ಲಿ ಅಸಮರ್ಪಕ ಅಭಿವ್ಯಕ್ತಿಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಆರೋಪಗಳು, ಪ್ರಕರಣದಲ್ಲಿ ಗೌತಮ್ ಗಂಭೀರ್ ಪಾತ್ರದ ಬಗ್ಗೆ ಹೆಚ್ಚಿನ ತನಿಖೆಗೆ ಅರ್ಹವಾಗಿವೆ ಎಂದು ಸೆಷನ್ಸ್ ಕೋರ್ಟ್ ತಿಳಿಸಿತ್ತು.